ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದು ಟ್ವೀಟ್ ನಲ್ಲಿ ತಿಳಿಸಿದ ಸಂಸದ ನಳಿನ್ ಕುಮಾರ್ ಕಟೀಲ್
Monday, November 14, 2022
ಮಂಗಳೂರು: ಬಹು ವಿವಾದಕ್ಕೊಳಗಾದ ಸುರತ್ಕಲ್ ಎನ್ ಐ ಟಿ ಕೆ ಟೋಲ್ ಗೇಟ್ ರದ್ದಾಗಿದೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶಗಳನ್ನು ಪೂರೈಸಲಾಗಿದೆ ಎಂದು ಟ್ವೀಟ್ ನಲ್ಲಿ ನಳಿನ್ ಕುಮಾರ್ ತಿಳಿಸಿದ್ದಾರೆ.
ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್ ಅನ್ನು ತೆರವು ಮಾಡಬೇಕೆಂದು ಟೋಲ್ ವಿರೋಧಿ ಸಮಿತಿ ಇತ್ತೀಚೆಗೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕಿತ್ತು. ಆ ಬಳಿಕವೂ ಟೋಲ್ ತೆರವು ಮಾಡಿರದ ಹಿನ್ನೆಲೆಯಲ್ಲಿ ಕಳೆದ 17 ದಿನಗಳಿಂದ ಅನಿರ್ದಿಷ್ಟವಾಧಿ ಹಗಲು ರಾತ್ರಿ ಧರಣಿ ನಡೆಸುತ್ತಿದೆ.