ಕಾಸರಗೋಡು:ಒಳ ಉಡುಪಿನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಯುವತಿಯ ಬಂಧನ
Monday, December 26, 2022
ಕಾಸರಗೋಡು; ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ 19 ವರ್ಷದ ಯುವತಿಯನ್ನು ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆಕೆಯ ಬಳಿಯಿದ್ದ ಒಂದು ಕೋಟಿ ಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಸರಗೋಡು ನಿವಾಸಿ ಶಹಲಾ ಬಂಧಿತ ಯುವತಿ.
1.884 ಕಿಲೋ ತೂಗುತ್ತಿದ್ದ ಚಿನ್ನವನ್ನು ಆಕೆ ಮೂರು ಪ್ಯಾಕೆಟ್ ಗಳನ್ನಾಗಿಸಿ ಒಳ ಉಡುಪಿನ ಒಳಗೆ ಇರಿಸಿದ್ದಳು. ಭಾನುವಾರ ರಾತ್ರಿ ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿದ್ದ ಶಹಲಾ ಕಸ್ಟಮ್ಸ್ ತಪಾಸಣೆ ಬಳಿಕ ರಾತ್ರಿ 11 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಳು. ಆದರೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಬ್ಯಾಗ್ ಸೇರಿದಂತೆ ಆಕೆಯ ಬಳಿ ಯಾವುದೇ ಚಿನ್ನ ಸಿಕ್ಕಿರಲಿಲ್ಲ.
ಯುವತಿಯನ್ನು ವಿಚಾರಣೆಗೊಳಪಡಿಸಿದರೂ ಸ್ಪಷ್ಟ ಉತ್ತರ ನೀಡದೇ ಏರು ದ್ವನಿಯಲ್ಲಿ ಮಾತನಾಡಿದ್ದಾಳೆ.
ಇದರಿಂದ ಸಂಶಯಗೊಂಡ ಮಹಿಳಾ ಪೊಲೀಸರು ಕೊನೆಗೆ ದೇಹವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಒಳ ಉಡುಪಿನಲ್ಲಿ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಪತ್ತೆಯಾಗಿದೆ.