ಮಂಗಳೂರು: ಬಿಜೆಪಿ ಚುನಾವಣಾ ಭೀತಿಯಿಂದ ಹಿಂದೂ ನಾಯಕರ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗಟ್ಟುವ ಕೆಲಸ ಮಾಡುತ್ತಿದೆ
Monday, December 26, 2022
ಮಂಗಳೂರು: ಬಿಜೆಪಿಯು ಚುನಾವಣಾ ಭೀತಿಯಿಂದ ಹಿಂದೂ ಕಾರ್ಯಕರ್ತರು, ನಾಯಕರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ಸುಳ್ಳು ಕೇಸು ದಾಖಲಿಸಿ ಜೈಲಿಗಟ್ಟುವ ಕೆಲಸ ಮಾಡುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಮುಖವಾಗಿ ಹಿಂದೂ ಮಹಾಸಭಾದ ನಾಯಕರ ಕೆಲಸ ಮಾಡುವ ಇಚ್ಛಾಶಕ್ತಿಯನ್ನು ಕುಗ್ಗಿಸುವ, ಪಕ್ಷದ ಚಟುವಟಿಕೆಗಳನ್ನು ನಿಲ್ಲಿಸುವಂತಹ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ತನ್ನ ಮೇಲೆ ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಸುಳ್ಳು ಸುಲಿಗೆ, ಬೆದರಿಕೆ ಕೇಸ್ ಹಾಕಿ ಆರೋಪಿಸಿ ಜೈಲಿಗಟ್ಟಲು ಯತ್ನಿಸಿತ್ತು. ಆದರೆ ನ್ಯಾಯಾಲಯ ಅವರಿಗೆ ಛೀಮಾರಿ ಹಾಕಿ ಬೇಲ್ ನೀಡಿದೆ ಎಂದರು.
ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ಹಿಂದೂ ಸಮುದಾಯ ಮಾತನಾಡುತ್ತಿದೆ. ಹಿಂದೂ ಮಹಾಸಭಾ ಕೂಡಾ ಹಿಂದೂ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು ಎಲ್ಲಾ 224 ಕ್ಷೇತ್ರಗಳಲ್ಲೂ ಚುನಾವಣೆ ಎದುರಿಸಲಿದೆ. ಕೇಸರಿ ಒಕ್ಕೂಟದ ಹೆಸರಲ್ಲಿ ನಾವು ಚುನಾವಣೆಗೆ ಸಜ್ಜಾಗಿದ್ದೇವೆ.ಜನವರಿ 15ರಂದು ಬೆಂಗಳೂರಿನಲ್ಲಿ ಹಿಂದೂ ಮಹಾಸಭಾದ ಪುನಶ್ಚೇತನ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಅಂದು 83 ಮಂದಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಇದನ್ನು ಕಂಡು ಹಿಂದೂ ಮಹಾಸಭಾದ ಮನೋಬಲ ಕುಗ್ಗಿಸಲು ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದು, ನಿಜವಾಗಿ ಅಧಿಕಾರಕ್ಕೆ ಬರಬೇಕೆಂದು ಇದ್ದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಯತ್ನಿಸಿ, ನಾವು ಚುನಾವಣೆಯಲ್ಲೇ ಉತ್ತರ ಕೊಡ್ತೇವೆ ಎಂದರು.
ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ, ಸಂಘ ಪರಿವಾರದ ದೊಡ್ಡ ಹುದ್ದೆಯಲ್ಲಿದ್ದವರು, ಕಾಂಗ್ರೆಸ್ ನ ನಾಯಕರು ಹಿಂದೂ ಮಹಾಸಭಾಕ್ಕೆ ಸೇರ್ಪಡೆಗೊಳ್ಳುತ್ತಿದಾರೆ. ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲ. ಅದಕ್ಕೆ ನಮ್ಮ ಅವಶ್ಯಕತೆ ಇರುವ ಕಾರಣ ನಾವು ಚುನಾವಣಾ ಅಖಾಡಕ್ಕೆ ಇಳಿದಿದ್ದೇವೆ. ಆದ್ದರಿಂದ ನಮ್ಮೆಲ್ಲಾ ಶಕ್ತಿಯನ್ನು ಒಟ್ಟು ಮಾಡಿಕೊಂಡು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಬಿಜೆಪಿಯವರಿಗೆ ತಡೆಯಲು ಶಕ್ತಿ ಇದ್ದಲ್ಲಿ ತಡೆಯಲಿ ಎಂದು ರಾಜೇಶ್ ಪವಿತ್ರನ್ ಹೇಳಿದರು.
ಮುತಾಲಿಕ್ ಸ್ಪರ್ಧೆ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ, ಬೆಂಬಲ ಕೇಳಿದರೆ ನೀಡುತ್ತೇವೆ.ಜನಾರ್ದನ ರೆಡ್ಡಿ ಹೊಸ ಪಕ್ಷ ಮಾಡಿದ್ದು ಸಂಪರ್ಕದಲ್ಲಿದ್ದಾರೆ ಎಂದರು.