ಮಂಗಳೂರು:ಹೊಸ ವರ್ಷ ಸಂಭ್ರಮಾಚರಣೆ ನೆಪದಲ್ಲಿ ಅಶ್ಲೀಲ ನೃತ್ಯ, ಮಾದಕ ದ್ರವ್ಯ ಪಾರ್ಟಿಗಳಿಗೆ ಅನುಮತಿ ನೀಡದಂತೆ ವಿಶ್ವ ಹಿಂದೂ ಪರಿಷತ್ ಆಗ್ರಹ
Saturday, December 17, 2022
ಮಂಗಳೂರು: ಹೊಸ ವರುಷದ ಹೆಸರಿನಲ್ಲಿ ಡಿಸೆಂಬರ್ 31 ರಂದು ಹೋಟೆಲ್, ಪಬ್ ಹಾಗೂ ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ಪಾನ ಪಾರ್ಟಿಗಳಿಗೆ ಅನುಮತಿ ನೀಡದಂತೆ ಹಿಂದೂ ಸಂಘಟನೆಗಳು ಮಂಗಳೂರು ನಗರ ಪೊಲೀಸ್ ಕಮಿಷನರ್ ಗೆ ಮನವಿ ಮಾಡಿದ್ದಾರೆ.
ಹೊಸ ವರುಷ ಆಚರಣೆ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿವೆ. ಇದನ್ನು ವಿಎಚ್ ಪಿ ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ. ಈಗಾಗಲೇ ಲವ್ ಜಿಹಾದ್ ಹೆಸರಿನಲ್ಲಿ ಮುಗ್ಧ ಯುವತಿಯರನ್ನು ಮೋಸಗೊಳಿಸಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತದೆ. ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಯುವಕರು ಇಂತಹ ಕೃತ್ಯಗಳಲ್ಲಿ ಸಕ್ರಿಯರಾಗಿದ್ದು, ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾದಂತಹ ಜಾಲಗಳು ಅಧಿಕವಾಗುತ್ತಿದೆ.
ಆದ್ದರಿಂದ ಯಾವುದೇ ಹೊಟೇಲ್, ಪಬ್ ಗಳಲ್ಲಿ ಹೊಸ ವರುಷದ ಪ್ರಯುಕ್ತ ನಡೆಯುವ ಪಾರ್ಟಿ, ಅಶ್ಲೀಲ ನೃತ್ಯಗಳಿಗೆ ಅನುಮತಿ ನೀಡಬಾರದು. ಅಲ್ಲದೆ ಎಲ್ಲಾ ಬಾರ್, ಪಬ್ ಮತ್ತು ಹೋಟೆಲ್ ಗಳನ್ನು ನಿಗದಿತ ಸಮಯದ ಒಳಗೆ ಮುಚ್ಚಿಸಲು ಕ್ರಮಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ತು ಮಂಗಳೂರು ಪೊಲೀಸ್ ಕಮಿಷನರ್ ಗೆ ಮನವಿ ಮಾಡಿದೆ.