ಮುಲ್ಕಿ:ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಯುವಕನಿಗೆ ಕಂಬಕ್ಕೆ ಕಟ್ಟಿ ಹಾಕಿ ಥಳಿತ
Sunday, December 18, 2022
ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಚುಡಾಯಿಸಿದ ಕಾರಣಕ್ಕೆ ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಘಟನೆ ಮುಲ್ಕಿ ಬಳಿಯ ಕೆರೆಕಾಡಿನಲ್ಲಿ ನಡೆದಿದೆ.
ದಾವೂದ್ ಎಂಬ ಯುವಕ ಬೈಕ್ ನಲ್ಲಿ ಹಿಂಬಾಲಿಸುತ್ತಾ ಬಂದು ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಯುವಕನ ದುರ್ವರ್ತನೆ ಬಗ್ಗೆ ಮಾಹಿತಿ ತಿಳಿದಿದ್ದ ಬಾಲಕಿಯ ತಂದೆ ಮತ್ತು ಅವರ ಸ್ನೇಹಿತರು ಗಮನಿಸಿದ್ದಾರೆ. ಮತ್ತೆ ಬೈಕಿನಲ್ಲಿ ಬಂದಿದ್ದ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಈ ವೇಳೆ, ಯುವಕನ ಕಡೆಯವರಿಗೂ, ಬಾಲಕಿ ಪೋಷಕರಿಗೂ ವಾಗ್ವಾದ ನಡೆದಿದೆ. ಜನರು ಸೇರಿ ಹಲ್ಲೆ ನಡೆಸುವುದನ್ನು ತಡೆದಿದ್ದಾರೆ. ಬಳಿಕ ಮುಲ್ಕಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ದಾವೂದ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಪೋಷಕರ ಗುಂಪಿನ ವಿರುದ್ಧವೂ ಪ್ರಕರಣ ದಾಖಲಾಗಿದೆ.