ಾಸನದ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಸ್ಫೊಟಕ ತಿರುವು;ಪಾಗಲ್ ಪ್ರೇಮಿಯ ಸಂಚು ಪೊಲೀಸ್ ತನಿಖೆಯಿಂದ ಬಯಲು
Tuesday, December 27, 2022
ಹಾಸನ; ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಸ್ಪೋಟ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ತನ್ನ ಪ್ರೀತಿ ನಿರಾಕರಿಸಿದ ಪಾಗಲ್ ಪ್ರೇಮಿಯೊಬ್ಬ ಮಿಕ್ಸಿಯಲ್ಲಿ ಸ್ಫೋಟಕ ಇಟ್ಟು ಪಾರ್ಸೆಲ್ ಕಳಿಸಿಕೊಟ್ಟು ಯುವತಿಯ ಹತ್ಯೆಗೆ ಯೋಜನೆ ಹಾಕಿದ್ದ ಕೃತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಗರದ ಕೆಆರ್ ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್ ನಲ್ಲಿ ದಿಢೀರ್ ಆಗಿ ಮಿಕ್ಸ ಡ್ರೈಂಡರ್ ಸ್ಫೋಟಗೊಂಡಿದ್ದು ಮಂಗಳೂರಿನ ಕುಕ್ಕರ್ ಬಾಂಬನ್ನು ನೆನಪಿಸಿತ್ತು. ಸೋಮವಾರ ಸಂಜೆ ಮಿಕ್ಸಿಯನ್ನು ವಿದ್ಯುತ್ ಸಂಪರ್ಕ ಕೊಟ್ಟು ಆನ್ ಮಾಡಿದ ಕೂಡಲೇ ಬ್ಲಾಸ್ಟ್ ಆಗಿತ್ತು. ಇದರಿಂದ ಕೊರಿಯರ್ ಶಾಪ್ ಮಾಲಕ ಶಶಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಭಾರೀ ಕುತೂಹಲ ಸೃಷ್ಟಿಸಿದ್ದಲ್ಲದೆ, ಉಗ್ರರ ಕೈವಾಡದ ಬಗ್ಗೆಯೂ ಶಂಕೆ ಕೇಳಿಬಂದಿತ್ತು. ತಂಡ, ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳವೂ ಬಂದು ತನಿಖೆ ನಡೆಸಿತ್ತು. ಉಗ್ರರು ಬಳಸುವ ಬಾಂಬ್ ಮಾದರಿ ಇರಲಿಲ್ಲ. ಬದಲಿಗೆ, ಸಣ್ಣ ಮಟ್ಟದ ಸ್ಫೋಟ ಆಗುವ ರೀತಿ ಏನೋ ಜೋಡಣೆ ಆಗಿದ್ದನ್ನು ತಜ್ಞರು ಪತ್ತೆ ಮಾಡಿದ್ದರು.
ಇದೇ ಸಂದರ್ಭದಲ್ಲಿ ಕೊರಿಯರ್ ಕಳುಹಿಸಿದ್ದ ವಿಳಾಸದ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದರು. ಪೊಲೀಸ್ ತನಿಖೆಯಲ್ಲ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗಾಗಿ ಮಾಡಿದ ಯೋಜನೆ ಹೊರಬಿದ್ದಿದೆ. ಪಾಗಲ್ ಪ್ರೇಮಿ ಮಿಕ್ಸಿಯೊಳಗೆ ಸ್ಫೋಟಕ ಇಟ್ಟು ಕೊರಿಯರ್ ಮಾಡಿದ್ದ. ಆದರೆ ಯಾರು ಕಳಿಸಿದ್ದಾರೆ ಎನ್ನುವ ವಿಳಾಸ ಇಲ್ಲದ ಕೊರಿಯರ್ ತನಗೆ ಬೇಡ ಎಂದು ಯುವತಿ ಕೊರಿಯರ್ ಶಾಪ್ ಗೆ ಬಾಕ್ಸನ್ನು ರಿಟರ್ನ್ ಮಾಡಿದ್ದಳು. ಈ ವೇಳೆ ಬಾಕ್ಸ್ ವಾಪಸ್ ಕಳಿಸಲು 350 ರೂ. ಶುಲ್ಕ ನೀಡಬೇಕೆಂದು ಕೊರಿಯರ್ ಮಾಲೀಕ ಕೇಳಿದ್ದು, ಅದಕ್ಕೆ ಮಹಿಳೆ ನಿರಾಕರಿಸಿದ್ದಳು. ಅದೇ ಸಂದರ್ಭದಲ್ಲಿ ಮಿಕ್ಸಿ ಸರಿ ಇದೆಯಾ ಎಂದು ಬಾಕ್ಸ್ ಓಪನ್ ಮಾಡಿ ಪರಿಶೀಲನೆ ನಡೆಸಲು ಮುಂದಾಗಿದ್ದಾಗಲೇ ಮಿಕ್ಸಿ ಸ್ಪೋಟಗೊಂಡಿತ್ತು.
ಮಿಕ್ಸಿಯೊಳಗೆ ಸಣ್ಣ ಪ್ರಮಾಣದ ಸ್ಫೋಟಕ ಇಟ್ಟು ಅದನ್ನ ಆನ್ ಮಾಡಿದರೆ ಬ್ಲಾಸ್ಟ್ ಆಗುವಂತೆ ಪ್ಲಾನ್ ಮಾಡಿದ್ದ ಪಾಗಲ್ ಪ್ರೇಮಿಯ ಕತರ್ನಾಕ್ ಐಡಿಯಾ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಕೊರಿಯರ್ ಬಂದರೂ ಓಪನ್ ಮಾಡದೇ ಹಿಂದಿರುಗಿಸಿದ್ದ ಯುವತಿ ಸೇಫ್ ಆಗಿದ್ದಾಳೆ. ಮಹಿಳೆ ವಾಪಸ್ ಮಾಡಿದ್ದ ಬಾಕ್ಸನ್ನು ಓಪನ್ ಮಾಡಲು ಹೋದ ಕೊರಿಯ ಮಾಲೀಕ ಬಾಕ್ಸ್ ಓಪನ್ ಮಾಡಿ ಗಾಯಗೊಂಡಿದ್ದಾರೆ. ಕೊರಿಯರ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.