ಮಂಗಳೂರು: ರಾತ್ರಿ 12.30ರವರೆಗೆ ಮಾತ್ರ ನ್ಯೂ ಈಯರ್ ಆಚರಣೆಗೆ ಅನುಮತಿ

ಮಂಗಳೂರು: ರಾತ್ರಿ 12.30ರವರೆಗೆ ಮಾತ್ರ ನ್ಯೂ ಈಯರ್ ಆಚರಣೆಗೆ ಅನುಮತಿ


ಮಂಗಳೂರು: ನ್ಯೂ ಈಯರ್ ಆಚರಣೆ ವೇಳೆ ದ.ಕ.ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ನೋಂದಾಯಿತ ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಡಿ.31ರಂದು ರಾತ್ರಿ 12.30ರವರೆಗೆ ಮಾತ್ರ ಕಾರ್ಯಕ್ರಮ ಆಯೋಜಿಸಲು ಅನುಮತಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. 

ಆದರೆ ಧ್ವನಿವರ್ಧಕ ಹಾಗೂ ಶಬ್ದ ಉಂಟು ಮಾಡುವ ಉಪಕರಣಗಳನ್ನು ರಾತ್ರಿ 10ರ ಬಳಿಕ ಬಳಸುವಂತಿಲ್ಲ. ಕಾರ್ಯಕ್ರಮ ಆಯೋಜನೆಗೆ ಸಂಬಂಧಪಟ್ಟ ಪೊಲೀಸ್‌ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯತಕ್ಕದ್ದು. ಸಭಾಂಗಣ, ತೆರೆದ ಸ್ಥಳ, ಕಲ್ಯಾಣ ಮಂಟಪ, ಸಭಾ ಭವನ, ಅಪಾರ್ಟ್ ಮೆಂಟ್, ಕಡಲ ತೀರ, ಹೋಮ್ ಸ್ಟೇ, ಮಾಲ್ ಪ್ರದೇಶಗಳಲ್ಲಿ ಡಿಜೆ, ಜಾಲಿ ಡಾನ್ಸ್ ಗಳನ್ನು ನಡೆಸುವಂತಿಲ್ಲ. 

ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಅಬಕಾರಿ ಇಲಾಖೆ ಮತ್ತು ವಿವಿಧ ಇಲಾಖೆಗಳಿಂದ ಅನುಮತಿ ಪಡೆದಂತಹ ಹೋಂ ಸ್ಟೇ, ಪಬ್, ಕ್ಲಬ್ ಪರಿಸರದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು. ಯಾವುದೇ ರೀತಿ ಕಾನೂನು ಬಾಹಿರ ಚಟುವಟಿಕೆ ನಡೆದಲ್ಲಿ ಮಾಲಕರನ್ನೇ ಜವಾಬ್ದಾರರನ್ನಾಗಿ ಮಾಡಿ ಕ್ರಮವಹಿಸಲಾಗುವುದು. ಪಬ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಅಶ್ಲೀಲ ನೃತ್ಯ, ಗಾಂಜಾ, ಅಫೀಮು, ಮತ್ತಿತರ ಮತ್ತೇರಿಸುವ ಅಮಲು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 

ಕಾರ್ಯಕ್ರಮದ ವೇಳೆ ಸಂಶಯಾಸ್ಪದ ವ್ಯಕ್ತಿಗಳು, ಅಪರಿಚಿತರು, ಸಮಾಜಘಾತಕ ಶಕ್ತಿಗಳು ಕಂಡುಬಂದಲ್ಲಿ ತಕ್ಷಣ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಶಾಂತಿ ಭಂಗ ಉಂಟಾಗದ ಹಾಗೆ ಎಲ್ಲಾ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಪೊಲೀಸ್‌ ಇಲಾಖೆಯು ಕ್ರಮ ಕೈಗೊಳ್ಳಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article