ಸುರತ್ಕಲ್: ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಕೊಠಡಿಯಲ್ಲಿ ಗುಪ್ತ ಕ್ಯಾಮರಾದಲ್ಲಿ ಮಹಿಳೆಯರ ಬಟ್ಟೆ ಬದಲಿಸುವ ದೃಶ್ಯ ಚಿತ್ರೀಕರಣ
Wednesday, December 7, 2022
ಸುರತ್ಕಲ್: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಬರುತ್ತಿದ್ದ ಮಹಿಳೆಯರ ಉಡುಪು ಬದಲಾಸುವ ದೃಶ್ಯವನ್ನು ರಹಸ್ಯ ಕ್ಯಾಮೆರಾ ಇರಿಸಿ ವೀಡಿಯೋ ಸೆರೆಹಿಡಿಯುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಪ್ರಸ್ತುತ ಬಜ್ಪೆಯಲ್ಲಿ ವಾಸವಾಗಿರುವ, ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿ ಪವನ್ ಕುಮಾರ್(21) ಕೃತ್ಯ ಎಸಗಿರುವ ಆರೋಪಿ ಎಂದು ಗುರುತಿಸಲಾಗಿದೆ.
ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದ ಮಹಿಳೆಯೋರ್ವರು ಸ್ಕ್ಯಾನಿಂಗ್ ಮಾಡಲೆಂದು ಸ್ಕ್ಯಾನಿಂಗ್ ಕೊಠಡಿಗೆ ಬಂದಿದ್ದರು. ಆದರೆ ಆಕೆ ಬಟ್ಟೆ ಬದಲಿಸುವ ಮೊದಲು ಕೊಠಡಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದ ವೇಳೆ ಗುಪ್ತ ಸ್ಥಳದಲ್ಲಿ ಮೊಬೈಲ್ ಇಟ್ಟಿದ್ದು ಪತ್ತೆಯಾಗಿದೆ. ತಕ್ಷಣ ಮಹಿಳೆ ಈ ವಿಚಾರವನ್ನು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಪವನ್ ಕುಮಾರ್ ಕೃತ್ಯ ಎಸಗಿರುವು ಗೊತ್ತಾಗಿದೆ.
ತಕ್ಷಣ ಆಸ್ಪತ್ರೆಯ ವೈದ್ಯರು ಆತನ ವಿರುದ್ಧ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪವನ್ ಕುಮಾರ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಈತ ಇದೇ ರೀತಿ ಹಲವಾರು ಮಹಿಳೆಯರ ವೀಡಿಯೋ ಚಿತ್ರೀಕರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಸಂಬಂಧ ಆರೋಪಿಯನ್ನು ಸುರತ್ಕಲ್ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.