ವಿಮೆ ಮೊತ್ತಕ್ಕಾಗಿ ಸುಪಾರಿ ಕೊಟ್ಟು ಪತ್ನಿಯ ಹತ್ಯೆ ಮಾಡಿಸಿದ ಪತಿ
Thursday, December 1, 2022
ಜೈಪುರ: ಹೆಂಡತಿ ಹೆಸರಿನಲ್ಲಿದ್ದ 1.90 ಕೋಟಿ ರೂ. ವಿಮೆ ಹಣಕ್ಕಾಗಿ ಗಂಡನೇ ಸುಪಾರಿ ಕೊಟ್ಟು ಪತ್ನಿಯನ್ನು ಹತ್ಯೆ ಮಾಡಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಅಗಸ್ಟ್ 5 ರಂದು ಹತ್ಯೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಗಂಡ ಮಹೇಶ್ ಸೇರಿದಂತೆ ಮೂವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಸುಂದರ ಸಂಸಾರ ಕಟ್ಟಿಕೊಳ್ಳುವ ಹಂಬಲದಲ್ಲಿ ಪತಿ ಮಹೇಶ್ ತನ್ನ ಪತ್ನಿ ಶಾಲು ಹೆಸರಲ್ಲಿ 1.90 ಕೋಟಿ ರೂ. ವಿಮೆ ಮಾಡಿಸಿದ್ದಾನೆ. ಆದರೆ ಕೆಲ ವರ್ಷಗಳಿಂದ ಇಬ್ಬರ ನಡುವೆ ದಿನವೂ ಜಗಳ, ಕೌಟುಂಬಿಕ ಸಂಘರ್ಷಗಳು ತಲೆದೋರಿದವು. ಪತಿಯ ಹಿಂಸೆ ಹೆಚ್ಚಾದಾಗ ವರದಕ್ಷಿಣೆ ಕೇಸ್ ದಾಖಲಿಸಿ, ಗಂಡನನ್ನು ಜೈಲಿಗೆ ಅಟ್ಟಿದಳು. ಇದೇ ಕೋಪದಲ್ಲಿದ್ದ ಮಹೇಶ್ ಆಕೆಯ ಕೊಲೆಗೆ 10 ಲಕ್ಷ ರೂಪಾಯಿ ಸುಪಾರಿ ನೀಡಿದ್ದ.
ಸಂಧಾನದ ನೆಪದಲ್ಲಿ ಆಕೆಯ ಬಳಿ ಹೋಗಿ, ನೀನೊಬ್ಬಳೇ ಹನ್ನೆರಡು ಸಲ ಬಾಲಾಜಿ ದೇವರ ದರ್ಶನ ಪಡೆದರೆ ಸುಂದರ ಜೀವನ ಸಿಗಲಿದೆ ಎಂದು ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದಾರೆ ಎಂದು ಹೇಳಿ ನಂಬಿಸಿದ. ಅಲ್ಲದೇ, ಹೆಂಡತಿಯನ್ನು ಆಕೆಯ ಸೋದರ ಸಂಬಂಧಿ ಜತೆಗೆ ದೇವರ ದರ್ಶನಕ್ಕೆ ಕಳಿಸಿಕೊಟ್ಟಿದ್ದ. ಅದರಂತೆ ಬೈಕ್‌ನಲ್ಲಿ ಶಾಲು ತೆರಳುತ್ತಿದ್ದ ಸಂದರ್ಭದಲ್ಲಿ ಜೈಪುರ ಸಮೀಪ ಸುಪಾರಿ ಹಂತಕರು SUV ಕಾರಿನಲ್ಲಿ ಬಂದು ಗುದ್ದಿ ಪರಾರಿಯಾದರು. ರಸ್ತೆ ಅಪಘಾತದಲ್ಲಿ ಪತ್ನಿ ಮೃತಳಾಗಿದ್ದಾಳೆ ಎಂದು ಎಲ್ಲರನ್ನೂ ನಂಬಿಸಿದ ಮಹೇಶ್,ಮರಣ ಪತ್ರ ಹಾಜರುಪಡಿಸಿ ಆಕೆಯ ಹೆಸರಿನಲ್ಲಿದ್ದ 1.90 ಕೋಟಿ ರೂ ವಿಮಾಮೊತ್ತ ಪಡೆದುಕೊಂಡಿದ್ದಾನೆ.
ಪ್ರಕರಣ ಭೇದಿಸಿದ ಜೈಪುರ ಪೊಲೀಸರು ಆರೋಪಿ ಪತಿ ಮಹೇಶ್ ಸಹಿತ ಮೂವರು ಸುಪಾರಿ ಕಿಲ್ಲರ್ ಗಳನ್ನು ಜೈಲಿಗಟ್ಟಿದ್ದಾರೆ.