Mangalore;ಗಬ್ಬೆದ್ದ ಸ್ಮಾರ್ಟ್ ಸಿಟಿ ; ಡ್ರೈನೇಜ್ ರಾಡಿಯಲ್ಲಿ ಜನರನ್ನು ಮೀಯಿಸಿದ ಅಧಿಕಾರಸ್ಥರು !

Mangalore;ಗಬ್ಬೆದ್ದ ಸ್ಮಾರ್ಟ್ ಸಿಟಿ ; ಡ್ರೈನೇಜ್ ರಾಡಿಯಲ್ಲಿ ಜನರನ್ನು ಮೀಯಿಸಿದ ಅಧಿಕಾರಸ್ಥರು !

ಸ್ಮಾರ್ಟ್ ಸಿಟಿ ಎನ್ನುವ ಕೋಡು ಸಿಕ್ಕಿಸಿಕೊಂಡಿರುವ ಮಂಗಳೂರು ನಗರಕ್ಕೆ, ಇಲ್ಲಿನ ಮಹಾನಗರ ಪಾಲಿಕೆಗೆ ನಾಚಿಕೆ, ಮಾನ ಮರ್ಯಾದೆ ಯಾವುದೂ ಇಲ್ಲ. ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ಒಂದು ವಾರದಿಂದ ಡ್ರೈನೇಜ್ ನೀರು ಮಳೆಗಾಲದ ರೀತಿ ಉಕ್ಕುತ್ತಾ ರಸ್ತೆಯಲ್ಲಿ ರಾಡಿಯೆಬ್ಬಿಸಿದೆ. ನಮ್ಮನ್ನು ಆಳುವವರಿಗೆ ಕಣ್ಣು, ಕಿವಿಯೆಲ್ಲ ಕುರುಡಾಗಿದೆ. ಜನರು ಅದೇ ಟಾಯ್ಲೆಟ್ ನೀರಿನಲ್ಲಿ ಕೈಕಾಲಿಗೆ ಅಭಿಷೇಕ ಮಾಡಿಕೊಂಡು ಮುಖ ಮುಚ್ಚಿಕೊಂಡು ನಡೆದುಕೊಂಡು ಹೋಗುತ್ತಿದ್ದಾರೆ. ಜ‌ನ ಯಾರಿಗೆ ಶಾಪ ಹಾಕಬೇಕು ಹೇಳಿ..

ನಾಲ್ಕು ದಿನಗಳ ಹಿಂದೆ ಪಾಲಿಕೆಯ ಕಾರ್ಮಿಕರು ಬಂದು ಅಲ್ಲೇನೋ ಪೈಪ್ ಹಾಕಿ ಏ‌ನೋ ಕೆರೆಯುತ್ತಿದ್ದರು. ಡ್ರೈನೇಜ್ ನೀರು ಮಾತ್ರ ನಿಂತಿರಲಿಲ್ಲ. ಅಲ್ಲಿದ್ದ ಪಾಲಿಕೆಯ ಅಧಿಕಾರಿಗಳು ಪೈ ಸೇಲ್ಸ್ ಕಟ್ಟಡದ ಬಳಿಯ ಮರದ ಬಗ್ಗೆ ದೂರುತ್ತಿದ್ದರು. ಮರದ ಬೇರು ಬಂದು ಡ್ರೈನೇಜ್ ಪೈಪ್ ಒಡೆದಿದೆ ಅಂತ.‌ ಆರು ತಿಂಗಳ ಹಿಂದಷ್ಟೇ ಬಂಟ್ಸ್ ಹಾಸ್ಟೆಲ್ ಕಾಂಕ್ರೀಟ್ ರಸ್ತೆಯನ್ನು ಅಗೆದು ಯುಜಿಡಿ ಕಾಮಗಾರಿ ನಡೆಸಲಾಗಿತ್ತು. ಈಗ ಅಲ್ಲಿಯೇ ಮೇಲ್ಭಾಗದಲ್ಲಿ ಡ್ರೈನೇಜ್ ನೀರು ಉಕ್ಕತೊಡಗಿದೆ. ಒಂದು ವಾರದಿಂದ ನೀರು ಉಕ್ಕುತ್ತಾ ಜುಳು ಜುಳು ಎನ್ನುತ್ತಾ ರಸ್ತೆಯಲ್ಲೆಲ್ಲ ಹರಿಯುತ್ತಿದ್ದರೂ ಪಾಲಿಕೆಯ ಅಧಿಕಾರಿಗಳಿಗೆ, ಕಾರ್ಪೊಟರ್ ಗಳಿಗೆ ಕಣ್ಣು ಕಾಣುತ್ತಿಲ್ಲ. ಒಂದು ತಿಂಗಳಿಂದ ಒಸರುತ್ತಿದ್ದು, ವಾರದಿಂದ ಉಕ್ಕತೊಡಗಿದೆ ಎನ್ನುತ್ತಾರೆ, ಸ್ಥಳೀಯರು. 

ಈ ಬಗ್ಗೆ ಅಲ್ಲಿನ ಕಾರ್ಪೊರೇಟರ್ ವಿನಯರಾಜ್ ಬಳಿ ಕೇಳಿದರೆ, ಅದು ಮರದ ಬೇರು ಬಂದಿದೆ, ಕೆಲಸ ಆಗ್ತಾ ಇದೆ ಎನ್ನುತ್ತಿದ್ದಾರೆ. ಒಂದು ವಾರ ಬೇಕಾ, ಡ್ರೈನೇಜ್ ನೀರು ನಿಲ್ಲಿಸಲು ಎಂದರೆ, ಅದು ಇದು ಎನ್ನುತ್ತಾರೆ. ಜೋರಿನಲ್ಲಿ ಮಾತನಾಡಿದರೆ, ನೀವು ಜೋರು ಮಾಡೋದು ಬೇಡ. ನಿಮ್ಮ ಮನೆ ಕೆಲಸದವನಲ್ಲ ನಾನು ಎಂದು ಮರುತ್ತರ ನೀಡುತ್ತಾರೆ. ಪಕ್ಕದ ಕೊಡಿಯಾಲ್ ಬೈಲ್ ವಾರ್ಡಿನ ಕಾರ್ಪೊರೇಟರ್ ಸುಧೀರ್ ಶೆಟ್ಟಿ ಆಳುವ ಪಕ್ಷದ ಸದಸ್ಯರು. ಅವರಲ್ಲಿ ಕೇಳಿದರೆ, ನಾನು ನೋಡಿಯೇ ಇಲ್ಲ ಎನ್ನುತ್ತಾರೆ. ರಸ್ತೆ ಮಧ್ಯದಲ್ಲಿ ಡ್ರೈನೇಜ್ ನೀರು ಉಕ್ಕಿ ವಾರ ಕಳೆದು ಗಬ್ಬೆದ್ದು ನಾರುತ್ತಿದ್ದರೂ, ಇವರಿಗೆ ಗೊತ್ತಿಲ್ಲ ಅಂದ್ರೆ ನಮ್ಮ ಅವಸ್ಥೆ ನೋಡಿ. ಬಳಿಕ ಯುಜಿಡಿ ಇಂಜಿನಿಯರ್ ಗೆ ಕಾನ್ಫರೆನ್ಸ್ ಹಾಕಿ ಸುಧೀರ್ ಶೆಟ್ಟಿ ಮಾತನಾಡಿಸಿದ್ರು. ಆ ಭಾಗದಲ್ಲಿ 40 ವರ್ಷ ಹಳೆಯ ಮಣ್ಣಿನ ಪೈಪ್ ಇದೆ. ಅದಕ್ಕೆ ಮರದ ಬೇರು ಹೋಗಿದೆ, ಹಾಗಾಗಿ ಮರವನ್ನು ತೆರವು ಮಾಡಲು ಫಾರೆಸ್ಟ್ ಪರ್ಮಿಶನ್ ಸಿಗಲಿಲ್ಲ ಎಂದರು ಇಂಜಿನಿಯರ್. ನಿನ್ನೆ ಹೇಗೂ ಮರ ಕಟ್ ಮಾಡಿದ್ರಲ್ಲ, ರಾತ್ರಿ ವೇಳೆ ಕೆಲಸ ಮಾಡಿ ಜಸ್ಟ್ ನೀರು ಒಸರುವುದನ್ನು ನಿಲ್ಲಿಸಬಹುದಿತ್ತಲ್ಲಾ ಎಂದು ಕೇಳಿದಾಗ, ಅದು ಸಾಧ್ಯವಿಲ್ಲ. ಡ್ರೈನೇಜ್ ಪೈಪ್ ಒಡೆದಿದೆ, ಸರಿಪಡಿಸಲು ಕನಿಷ್ಠ ಇನ್ನೊಂದು ವಾರ ಬೇಕು ಎಂದುಬಿಟ್ಟರು. 
Video

ಈಗೆಲ್ಲ ಏನೇನೋ ತಂತ್ರಜ್ಞಾನ ಬಂದಿದೆ, ಡ್ರೈನೇಜ್ ನೀರು ಉಕ್ಕುವುದನ್ನು ನಿಲ್ಲಿಸಕ್ಕಾಗಲ್ಲ ಅಂದ್ರೆ ಇವರೆಲ್ಲ ಯಾವ ಸೀಮೆಯ ಇಂಜಿನಿಯರುಗಳೋ.. ಕಳೆದ ಬಾರಿ ಲೋಬೊ ಶಾಸಕರಾಗಿದ್ದಾಗ ಮಂಗಳೂರಿನ ಡ್ರೈನೇಜ್ ಪೈಪ್ ಕಾಮಗಾರಿಗಾಗಿ 350 ಕೋಟಿ ಸುರಿದು ಪಾಲಿಕೆಯ ಅಧಿಕಾರಸ್ಥರೆಲ್ಲ ತಿಂದು ತೇಗಿದ್ರು. ಆನಂತರ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಗರದಲ್ಲಿ ಎಲ್ಲಿಯೂ ಯುಜಿಡಿ ಪೈಪ್ ಲೈನೇ ಇಲ್ಲ ಎಂದು ಹೇಳಿ ಮತ್ತೆ ಕಾಮಗಾರಿ ನಡೆಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಸ್ಮಾರ್ಟ್ ಸಿಟಿ, ಪಾಲಿಕೆಯ ದುಡ್ಡು ಹೀಗೆ ಎಲ್ಲವನ್ನೂ ಕೋಟಿಗಟ್ಟಲೆ ಸುರಿದರು. ವರ್ಷದ ಹಿಂದೆ ಕದ್ರಿ ಕಂಬ್ಲ, ಬಂಟ್ಸ್ ಹಾಸ್ಟೆಲ್, ಪಿವಿಎಸ್, ಜ್ಯೋತಿ ಹೀಗೆ ಎಲ್ಲ ಕಡೆಯೂ ಯುಜಿಡಿ ಕೆಲಸ ಮಾಡಲಾಗಿತ್ತು. ಹಾಗಿದ್ದರೂ, ಡ್ರೈನೇಜ್ ನೀರು ಉಕ್ಕುತ್ತಲೇ ಇದೆ.. ಮಳೆಗಾಲದಲ್ಲಿ ಡ್ರೈನೇಜ್ ಕಾಲುವೆ ಉಕ್ಕಿ ರಸ್ತೆಯಲ್ಲಿ ನೀರು ಹರಿಯೋದು ಕಾಮನ್ ಆಗಿದೆ. ಈಗ ಮಳೆ ಇಲ್ಲದಿದ್ದರೂ, ಟಾಯ್ಲೆಟ್ ನೀರನ್ನು ರಸ್ತೆಯಲ್ಲಿ ಬಿಟ್ಟು ಸಾರ್ವಜನಿಕರ ಆರೋಗ್ಯ ಹಾಳು ಮಾಡುತ್ತಿದ್ದಾರೆ. ದಿನವೂ ಸಾರ್ವಜನಿಕರು ಟಾಯ್ಲೆಟ್ ‌ನೀರಿ‌ನಲ್ಲಿ ನಡೆದು ಹೋಗುತ್ತಿದ್ದರೂ ಅಧಿಕಾರಸ್ಥರು ಏನೂ ಆಗಿಯೇ ಇಲ್ಲ ಎಂಬಂತಿದ್ದಾರೆ. ಮೇಯರ್ ಸಾಹೇಬ್ರಿಗೆ ಕೇಳಿದ್ರೆ, ನಿನ್ನೆಯಷ್ಟೇ ಗೊತ್ತಾಯ್ತು. ಇವತ್ತೇ ಸರಿಪಡಿಸುತ್ತೇನೆ ಎಂದಿದ್ದಾರೆ. 

ಏ‌ನೂ ತಪ್ಪು ಮಾಡದ ಮರಕ್ಕೆ ಈಗ ಕೊಡಲಿ ಹಾಕಿದ್ದಾರೆ. ಬೇರು ಬಂದಿದ್ದರೆ ಅದನ್ನು ತೆರವು ಮಾಡಿ, ತತ್ಕಾಲಕ್ಕೆ ನೀರು ಹರಿಯಲು ವ್ಯವಸ್ಥೆ ಮಾಡಬಹುದಿತ್ತು. ಆದರೆ ಯಾರದ್ದೋ ಹಿತಾಸಕ್ತಿಗಾಗಿ ಮರ ಕಡಿಯಬೇಕಿತ್ತು ಇವರಿಗೆ. ಅದಕ್ಕಾಗಿ ವಾರ ಕಾಲ ನೀರು ಹರಿಸಿದ್ದಾರೆ. ಸ್ಮಾರ್ಟ್ ಸಿಟಿಯನ್ನು ಗಬ್ಬೆದ್ದ ಸಿಟಿಯಾಗಿ ಮಾಡಿದ್ದಾರೆ. ಇವರಿಗೆ ಬೈದರೆ ಆಗಲ್ಲ. ಕ್ಯಾಕರಿಸಿ ಉಗಿಯಬೇಕು.. ಡ್ರೈನೇಜ್ ಹರಿವು ನಿಲ್ಸಬೇಕು ಎನ್ನುವ ದರ್ದು ಅಲ್ಲಿನ ಕಾರ್ಪೊರೇಟರ್ ಗೆ ಇದ್ದರೆ ರಾತ್ರಿ- ಹಗಲು ಕೆಲಸ ಮಾಡಿಸುತ್ತಿದ್ದರು. ವಾರ ಕಾಲದಿಂದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ಸಾಗುವ ಸಾವಿರಾರು ಜನರ ಕಾಲು ತೊಳೆಸಿದ್ದಾರೆ. ಭರ್ರೆಂದು ಬರುವ ವಾಹನಗಳಿಂದ ನೀರನ್ನು ಮೈಮೇಲೆ ಹಾರಿಸಿದ್ದಾರೆ. ಇದರಿಂದ ಮತ್ತೊಂದು ರೋಗ ರುಜಿನ ಎದುರಾದರೆ ಇವರಿಗೇನು ಧಾಡಿ ಬಿಡಿ.. 

- Giridhar shetty

Ads on article

Advertise in articles 1

advertising articles 2

Advertise under the article