Mangalore ಕುಡುಕನ ಕೈಗೆ ಸಿಕ್ಕಿತು ಕಂತೆ ಕಂತೆ ನೋಟು|ಸಿಕ್ಕಿದ ಕಾಸು ಕ್ಷಣದಲ್ಲೇ ಪೊಲೀಸ್ ಪಾಲು
Tuesday, December 6, 2022
ಮಂಗಳೂರು: ದಾರಿ ಬದಿಯಲ್ಲಿ ಕುಡಿದು ಬಿದ್ದ ಕುಡುಕನಿಗೆ ಸಿಕ್ಕಿದ 10 ಲಕ್ಷ ರೂ. ಗಂಟೊಂದು ಅರ್ಧಗಂಟೆಯಲ್ಲೇ ಪೊಲೀಸರ ಪಾಲಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಆತನ ಕುಡಿತದ ಚಟದಿಂದಲೇ ಭಾರೀ ಮೊತ್ತದ ಈಡುಗಂಟು ಪೊಲೀಸರ ಕೈ ಸೇರಿದೆ. ಇದೀಗ ವಾರ ಕಳೆದರೂ ಹಣ ವಾರೀಸುದಾರರಿಲ್ಲದೆ ಪೊಲೀಸ್ ಠಾಣೆಯಲ್ಲಿಯೇ ಉಳಿದಿದೆ.
ನವೆಂಬರ್ 27 ರಂದು ಪಂಪ್ ವೆಲ್ ಬಳಿ ಶಿವರಾಜ್ ಎಂಬಾತ ಅಲ್ಲಿಯೇ ಸಮೀಪದ ವೈನ್ ಶಾಪ್ ನಲ್ಲಿ ಮದ್ಯಪಾನ ಮಾಡಿ ಹೊರಗಡೆ ನಿಂತಿದ್ದ. ಆಗ ಹೊರಗಡೆ ಪಾರ್ಕಿಂಗ್ ಸ್ಥಳದಲ್ಲಿ ಚೀಲವೊಂದು ಅನಾಥವಾಗಿ ಬಿದ್ದಿತ್ತು. ಇದನ್ನು ಶಿವರಾಜ್ ಹಾಗೂ ಮತ್ತೋರ್ವ ಕೂಲಿ ಕಾರ್ಮಿಕ ನೋಡಿದ್ದಾರೆ. ತಕ್ಷಣ ಶಿವರಾಜ್ ಚೀಲವನ್ನು ಎತ್ತಿ ನೋಡಿದಾಗ 500, 2000 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡಿದೆ. ಇಬ್ಬರೂ ಒಂದು ಕ್ಷಣಕ್ಕೆ ನೋಟುಗಳ ಬಂಡಲ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಕಂತೆ ಕಂತೆ ನೋಟಿನ ಬಂಡಲ್ ಕಂಡಿದ್ದೇ ಮತ್ತೆ ಮದ್ಯ ಕುಡಿಯುವ ಸೆಳೆತಕ್ಕೊಳಗಾಗಿದ್ದಾರೆ. ಬಂಡಲ್ ನಿಂದ ಎರಡು ನೋಟು ಎಳೆದು ಮತ್ತೆ ವೈನ್ ಶಾಪ್ ನೊಳಗೆ ಕಾಲಿಟ್ಟಿದ್ದಾರೆ. ಬಳಿಕ ಹೊರ ಬಂದ ಇಬ್ಬರೂ ಅನತಿ ದೂರ ಸಾಗಿದ್ದಾರೆ. ಆಗ ಕೂಲಿ ಕಾರ್ಮಿಕ ತನಗೇನು ಇಲ್ಲವೇ ಎಂದಾಗ 2000, 500 ರೂ. ಮುಖಬೆಲೆಯ ನೋಟಿನ ಒಂದು ಬಂಡಲನ್ನು ಶಿವರಾಜ್ ಆತನ ಕೈಗೆ ನೀಡಿದ್ದಾನೆ. ಉಳಿದ ನೋಟುಗಳ ಕಂತೆಯನ್ನು ಹಿಡಿದು ಮುಂದಕ್ಕೆ ಹೋಗಲಾಗದ ಶಿವರಾಜ್ ಮತ್ತೆ ವೈನ್ ಶಾಪ್ ಗೆ ನುಗ್ಗಿ ಕಂಠಪೂರ್ತಿ ಕುಡಿದಿದ್ದಾನೆ.
ಅಲ್ಲಿಂದ ಹೊರ ಬರುವಾಗ ಕಂಕನಾಡಿ ಠಾಣೆಯ ಪೊಲೀಸರು ತಯಾರಾಗಿ ನಿಂತಿದ್ದ, ಈತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಾನು ಒಂದು ಬಂಡಲ್ ಹಣವನ್ನು ಕೂಲಿ ಕಾರ್ಮಿಕನಿಗೆ ನೀಡಿದ್ದಾಗಿ ತಿಳಿಸಿದ್ದಾನೆ. ಆದರೆ ಆತನನ್ನು ಹುಡುಕಾಡಿದರೂ ಈವರೆಗೆ ಕೂಲಿ ಕಾರ್ಮಿಕ ಪತ್ತೆಯಾಗಿಲ್ಲ. ಇದೀಗ ಹಣದ ಬಂಡಲ್ ಗಳು ಕಂಕನಾಡಿ ಠಾಣೆಯಲ್ಲಿದೆ. ಆದರೆ ಈವರೆಗೆ ಹಣದ ವಾರಸುದಾರರ ಪತ್ತೆಯಾಗಿಲ್ಲ ಮತ್ತು ದೂರೂ ದಾಖಲಾಗಿಲ್ಲ. ಈವರೆಗೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಲ್ಲ ಎಂದು ಹೇಳಲಾಗುತ್ತಿದೆ.