ಸಾವಿನ ಬಾಗಿಲಲ್ಲಿ ನಿಂತಿದ್ದ 74 ರ ಅಪ್ಪನಿಗೆ ಕಿಡ್ನಿ ನೀಡಿದ 40 ರ ಮಗಳು- ಅಪ್ಪ, ಮಗಳ ಬಾಂಧವ್ಯಕ್ಕೆ ಸಾಕ್ಷಿಯಾದ ಲಾಲೂ ಪ್ರಸಾದ್ ಯಾದವ್,ರೋಹಿಣಿ ಆಚಾರ್ಯ
Tuesday, December 6, 2022
ಪಾಟ್ನಾ: ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಸಿಂಗಾಪುರದಲ್ಲಿ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ. ಸಿಂಗಾಪುರದಲ್ಲಿ ನೆಲೆಸಿರುವ ಅವರ ಮಗಳೇ ಲಾಲು ಅವರಿಗೆ ಕಿಡ್ನಿ ದಾನ ಮಾಡಿ ತಂದೆಗೆ ಹೊಸ ಬದುಕು ನೀಡಿದ್ದಾರೆ.
ಈ ಬಗ್ಗೆ ಖಚಿತ ಪಡಿಸಿದ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಟ್ವೀಟ್ ಮಾಡಿ, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಸಿಂಗಾಪುರದಲ್ಲಿ ಯಶಸ್ವಿ ಮೂತ್ರಪಿಂಡ ಕಸಿ ಸರ್ಜರಿಗೆ ಒಳಗಾಗಿದ್ದಾರೆ ಹಾಗೂ ಅವರನ್ನು ಇದೀಗ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಕಳೆದ ಹಲವು ತಿಂಗಳುಗಳಿಂದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಬಳಿಕ ಲಾಲು ಅವರ ಪುತ್ರಿ ಸಿಂಗಾಪುರ ನೆಲೆಸಿರುವ ರೋಹಿಣಿ ಆಚಾರ್ಯ ತಂದೆಗೆ ಕಿಡ್ನಿ ದಾನ ಮಾಡಲು ಮುಂದಾದರು.
ಕೆಲ ದಿನಗಳ ಹಿಂದೆ ರೋಹಿಣಿ ಅವರು ತಮ್ಮ ತಂದೆಗೆ ಕಿಡ್ನಿ ದಾನ ಮಾಡುವ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ನಾನು ನನ್ನ ತಂದೆಗೆ ನನ್ನ ದೇಹದ ಒಂದು ಸಣ್ಣ ಮಾಂಸವನ್ನು ನೀಡುತ್ತಿದ್ದೇನೆ. ನಾನು ಅಪ್ಪನಿಗಾಗಿ ಏನು ಬೇಕಾದರೂ ಮಾಡಬಲ್ಲೆ. ಎಲ್ಲವೂ ಚೆನ್ನಾಗಿ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅಪ್ಪ ಮತ್ತೊಮ್ಮೆ ಆರೊಗ್ಯವಾಗಿ ಧ್ವನಿ ಎತ್ತುತ್ತಾರೆ ಎಂದು ತಿಳಿಸಿದ್ದರು.