ಮಂಗಳೂರು: ಡಿಕೆ ಶಿವಕುಮಾರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ ಬ್ಯಾಟಿಂಗ್
Friday, December 16, 2022
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ, ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಅವರಿಗೆ ಇಂತಹ ಹೇಳಿಕೆಗಳೇ ಬೇಕಾಗಿರೋದು. ಕುಕ್ಕರ್ ಸ್ಪೋಟ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಅದು ಬಿಟ್ಟು ಭಯೋತ್ಪಾದನೆಗೆ ಸಹಕಾರ ನೀಡುತ್ತೇನೆಂದು ಹೇಳಿದ್ದಾರೆಯೇ?. ಬಿಜೆಪಿಯವರು ಅದನ್ನು ಅನುಕೂಲಕ್ಕೆ ತಕ್ಕಂತೆ ತಿರುಚಿ ಜನಗಳ ಮುಂದೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ದೇಶದಲ್ಲಿ ಭಯೋತ್ಪಾದನೆ ಇದ್ದರೆ ಬಿಜೆಪಿಯವರು ಹತ್ತಿಕ್ಕಲಿ. ಅವರಿಗೆ ಜನ ಅಧಿಕಾರ ಕೊಟ್ಟಿದ್ದಾರೆ, ಡಬಲ್ ಇಂಜಿನ್ ಸರಕಾರವಿದೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 9 ವರ್ಷವಾಯಿತ್ತಲ್ಲಾ ಭಯೋತ್ಪಾದನೆಯನ್ನು ಹತ್ತಿಕ್ಕಲಿ. ದೇಶದಲ್ಲಿ ಎಲ್ಲೆಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದೆಯೋ ಅದನ್ನು ಹತ್ತಿಕ್ಕಲಿ. ಅವರಿಗೆ ಅಧಿಕಾರ ಕೊಟ್ಟದ್ದೇಕೆ ಮತ್ತೆ. ಬರೀ ಜನರನ್ನು ಪ್ರಚೋದಿಸಿ ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಡೋದಕ್ಕಲ್ಲ ಅಧಿಕಾರ ನೀಡಿದ್ದು ಎಂದರು.
Video
ನೈತಿಕ ಪೊಲೀಸ್ ಗಿರಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯವರು ಇದಕ್ಕೆ ಪ್ರೋತ್ಸಾಹಿಸುವ ಹೇಳಿಕೆ ನೀಡುತ್ತಿದ್ದಾರೆ.ರಾಜ್ಯದಲ್ಲಿ ಸುಮಾರು ಏಳೆಂಟು ಪ್ರಕಣಗಳಾಗಿದ್ದು, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತಗೆದುಕೊಳ್ಳಲಿ. ಸಿಎಂ ಬೊಮ್ಮಾಯಿಯವರಿಗೆ ಕಾನೂನು ಗೊತ್ತಿದೆಯೇ ಎಂದು ನನಗೆ ಅರಿವಿಲ್ಲ. ಸಂವಿಧಾನದಲ್ಲಿ ಇದಕ್ಕೆ ಎಲ್ಲಾದರೂ ಅವಕಾಶವಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಪೊಲೀಸರು ಇರೋದೇಕೆ ಮತ್ತೆ. ಅನಗತ್ಯವಾಗಿ ಇನ್ನೊಬ್ಬರ ಖಾಸಗಿ ವಿಚಾರದಲ್ಲಿ ಪ್ರವೇಶ ಮಾಡೋದನ್ನು ನಾನು ಖಂಡಿಸುತ್ತೇನೆ. ಸರಕಾರವೂ ಇದಕ್ಕೆ ಅವಕಾಶ ಕೊಡಬಾರದು. ಸಿಎಂ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿದರೆ ಏನಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.