ಮಂಗಳೂರು: ನಾರಾಯಣ ಗುರು ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 658 ಕಿ.ಮೀ. ಪಾದಯಾತ್ರೆ-ಪ್ರಣವಾನಂದ ಸ್ವಾಮೀಜಿ
Friday, December 16, 2022
ಮಂಗಳೂರು: ಬಿಲ್ಲವ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿ ಮಂಗಳೂರಿನಿಂದ ಬೆಂಗಳೂರಿಗೆ ಜನವರಿ 6ರಿಂದ 658 ಕಿಮೀ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು ಜ.6 ರಂದು ಬೆಳಗ್ಗೆ 10ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಧಾರ್ಮಿಕ ಸಭೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಸಭೆಯಲ್ಲಿ ಮಡಿವಾಳ ಲಂಬಾಣಿ ಸೇರಿದಂತೆ 25 ಹಿಂದುಳಿದ ಸಮುದಾಯದ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ. ತೆಲಂಗಾಣದ ಸಚಿವ ಶ್ರೀನಿವಾಸ ಗೌಡ, ಡೆಪ್ಯುಟಿ ಸ್ಪೀಕರ್ ಪದ್ಮರಾವ್, ಮಂತ್ರಿಗಳಾದ ಪ್ರಕಾಶ್ ಗೌಡ ಮತ್ತು ವಿವೇಕಾನಂದ, ಆಂಧ್ರ ಪ್ರದೇಶದ ಜೋಗಿ ರಮೇಶ್, ಭರತ್, ಕೇರಳದ ಮಂತ್ರಿ ಎ.ಕೆ. ಶಶೀಂದ್ರ, ರಾಜ್ಯದ ಸಮುದಾಯದ ಎಂಎಲ್ಎ, ಎಂಪಿಗಳಿಗೂ ಆಹ್ವಾನ ನೀಡಲಾಗಿದೆ ಎಂದರು.
Video
ಮಧ್ಯಾಹ್ನ 12.30ಕ್ಕೆ ಸಮಾರಂಭದ ಬಳಿಕ 1ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಮೊದಲ ದಿನ ಮುಲ್ಕಿಯಲ್ಲಿ ವಾಸ್ತವ್ಯ, 2ನೇ ದಿನ ಕಾಪುವಿನಲ್ಲಿ ವಾಸ್ತವ್ಯ. ಹೀಗೆ ರೂಟ್ ಮ್ಯಾಪ್ ತಯಾರಾಗಿದೆ ಎಂದರು.
ಶಿವಗಿರಿ ಮಠದಿಂದ ಇಬ್ಬರು ಸನ್ಯಾಸಿಗಳು, ಸಮುದಾಯದ ಸ್ವಾಮೀಜಿಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಹತ್ತು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪಾದಯಾತ್ರೆ ನಡೆಸಲಾಗುತ್ತಿದೆ. ಅದರಲ್ಲಿ ಪ್ರಮುಖ ೩ ಬೇಡಿಕೆಗಳಾದ ನಿಗಮ, ರಾಜ್ಯಾದ್ಯಂತ ಸಮುದಾಯಕ್ಕೆ ಶೇಂದಿ ಇಳಿಸಿ ಮಾರಾಟ ಮಾಡಲು ಅವಕಾಶ ನೀಡಬೇಕು, ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಸರ್ಕಾರದ ದೌರ್ಜನ್ಯ ನಿಲ್ಲಿಸಬೇಕು. ಅಲ್ಲದೆ ದೇವಾಲಯವನ್ನು ಮೇಲ್ವರ್ಗಕ್ಕೆ ಒಪ್ಪಿಸುವ ಹುನ್ನಾರ ನಿಲ್ಲಿಸಬೇಕೆಂದು ಆಗ್ರಹಿಸಿದರು.