ಮಂಗಳೂರು : ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ದ.ಕ.ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ; ಅಬ್ದುಲ್ ಮಜೀದ್ ಮೈಸೂರು
Wednesday, December 21, 2022
ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿಗೆ ಸರಕಾರ ಕುಮ್ಮಕ್ಕು ನೀಡುತ್ತಿದೆ ಎಂಬ ವಿಚಾರ ಜನಪ್ರತಿನಿಧಿಗಳ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಅನೈತಿಕ ಗೂಂಡಾಗಿರಿಯನ್ನು ಎಸ್ ಡಿಪಿಐ ಖಂಡಿಸುತ್ತದೆ. ರಾಜ್ಯ ಸರಕಾರ ಈ ವಿಚಾರದಲ್ಲಿ ತನ್ನ ಹೊಣೆಗಾರಿಕೆಯನ್ನು ಹೊರಬೇಕು. ಅಧಿವೇಶನದಲ್ಲಿ ಈ ಬಗ್ಗೆ ಎಲ್ಲಾ ವಿರೋಧ ಪಕ್ಷಗಳು ಗಂಭೀರ ಚರ್ಚೆ ನಡೆಸಿ, ಅನೈತಿಕ ಗೂಂಡಾಗಿರಿಗೆ ಸಂಪೂರ್ಣ ಕಡಿವಾಣ ಹಾಕಬೇಕಿದೆ. ದ.ಕ.ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ನಡೆಯುತ್ತಿದೆ ಎಂಬುದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿಯೇ ಒಪ್ಪಿಕೊಂಡಿದ್ದಾರೆ. ಕಳೆದ 2 ವರ್ಷದಲ್ಲಿ 31 ಪ್ರಕರಣಗಳು ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಕೇಸ್ ದಾಖಲಾಗಬೇಕೆಂದು ಕಾಯುವುದೇಕೆ?. ಪೊಲೀಸ್ ಇಲಾಖೆ ಮಾಡುವ ಕೆಲಸವನ್ನು ಕಾನೂನು ಕೈಗೆತ್ತಿಕೊಂಡು ಗೂಂಡಾಗಳು ಮಾಡುತ್ತಾರೆಂದರೆ ಅವರ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬಹುದಲ್ಲ. ಇನ್ನೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರಲಾರದಷ್ಟು ಹದಗೆಡುವ ಸಾಧ್ಯತೆಯಿದೆ. ಆದ್ದರಿಂದ ಎಸ್ಪಿ ಹಾಗೂ ಪೊಲೀಸ್ ಕಮಿಷನರ್ ಅವರು ಇಂತಹ ಪ್ರಕರಣಗಳಿಗೆ ಶಾಶ್ವತ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ತಂಡವನ್ನು ರಚಿಸಲಿ. ಗುಪ್ತಚರ ಇಲಾಖೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಕಾರ್ಯವೂ ಆಗಲಿ ಎಂದು ಅಬ್ದುಲ್ ಮಜೀದ್ ಮೈಸೂರು ಆಗ್ರಹಿಸಿದರು.