ಮಂಗಳೂರು: ಜ.7ರಂದು ಎಸ್ ಡಿಪಿಐನ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
Wednesday, December 21, 2022
ಮಂಗಳೂರು: ವಿಧಾನಸಭಾ ಚುನಾವಣೆಗೆ ಈ ಬಾರಿ 100ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಎಸ್ ಡಿಪಿಐ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜನವರಿ 7ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಿದ್ದಾರೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ಮಂಗಳೂರಿನಲ್ಲಿ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಅನುಮೋದನೆಗೊಂಡಿದೆ. ದ.ಕ.ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಎಸ್ ಡಿಪಿಐ ಸ್ಪರ್ಧಿಸಲಿದೆ. ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಹಾಗೂ ಜಿಲ್ಲೆಗಳಿಂದ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಲಾಗುತ್ತದೆ. ಅಲ್ಲಿ 3 ಅಭ್ಯರ್ಥಿಗಳ ಹೆಸರು ಅಂತಿಮಗೊಂಡು ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿಗೆ ಕಳುಹಿಸಲಾಗುತ್ತದೆ. ಆ ಬಳಿಕ ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳುತ್ತದೆ ಎಂದರು.
ಚುನಾವಣಾ ಕಣದ ಬೇರೆ ಬೇರೆ ಕ್ಷೇತ್ರಗಳಲ್ಲಿ ನನ್ನ ಹೆಸರು ಕೂಡಾ ಪ್ರಸ್ತಾಪಿಸಲಾಗುತ್ತಿದೆ. ದ.ಕ.ಜಿಲ್ಲೆಯ ಉಳ್ಳಾಲ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹೆಸರು ಸೂಚಿಸಲಾಗಿದೆ. ಅಲ್ಲದೆ ನಾನು ಈಗಾಗಲೇ ಎರಡು ಬಾರಿ ಸ್ಪರ್ಧಿಸಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲೂ ನನ್ನ ಹೆಸರಿನ ಪಟ್ಟಿ ಹೋಗಿದೆ. ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಎಲ್ಲಿ ಸೂಚಿಸುತ್ತದೆ, ಆ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲಿದ್ದೇನೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ಎಸ್ ಡಿಪಿಐನ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಒಟ್ಟು 20 ಕಚೇರಿಗಳಿಗೆ ಎನ್ಐಎ ಅಕ್ರಮವಾಗಿ ಬೀಗ ಮುದ್ರೆ ಜಡಿದಿದೆ ಎಂದು ನಾವು ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದೇವೆ. ಈಗಾಗಲೇ ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ, ಎಸ್ಪಿಗೆ, ಪೊಲೀಸ್ ಕಮಿಷನರ್ ರವರಿಗೆ, ಡಿಸಿಯವರಿಗೆ ನೋಟಿಸ್ ಬಂದಿದೆ. ಆದರೆ ಕೋರ್ಟ್ ನಿಗದಿಪಡಿಸಿರುವ ದಿನಾಂಕಕ್ಕೆ ಇವರು ಯಾವುದೇ ಜವಾಬು ನೀಡಿಲ್ಲವೆಂದು ದಿನಾಂಕವನ್ನು ಮುಂದೂಡಲಾಗಿದೆ. ಈಗ ಉಚ್ಚ ನ್ಯಾಯಾಲಯಕ್ಕೆ ರಜೆ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ವಾದ ನಡೆಯಲಿದೆ ಎಂದು ಅಬ್ದುಲ್ ಮಜೀದ್ ಮೈಸೂರು ತಿಳಿಸಿದರು.