ಮಂಗಳೂರು: ದೇಶದಲ್ಲಿ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ ಕಾಂಗ್ರೇಸ್- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ
Thursday, December 15, 2022
ಮಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ದೇಶದಲ್ಲಿ ಉಗ್ರ ಚಟುವಟಿಕೆಗಳು ಪ್ರಾರಂಭವಾಯಿತು. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪ್ರೇರಣೆಯೇ ಕಾಂಗ್ರೆಸ್. ಬಿಂದ್ರನ್ ವಾಲೆ ಸೃಷ್ಟಿ ಇಂದಿರಾ ಗಾಂಧಿಯಿಂದಲೇ ಆಗಿದೆ. ಕಾಶ್ಮೀರದಲ್ಲಿ ಪ್ರಾರಂಭವಾದ ಭಯೋತ್ಪಾದನೆ ಪ್ರತಿಯೊಂದು ರಾಜ್ಯ, ಊರುಗಳಲ್ಲಿ ಹೆಚ್ಚಾಯಿತು. ಇದೇ ಮಾನಸಿಕತೆಯನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೊಂದಿದ್ದಾರೆ. ಆದ್ದರಿಂದಲೇ ಅವರು ಮಂಗಳೂರು ಬಾಂಬ್ ಪ್ರಕರಣವನ್ನು ಭಯೋತ್ಪಾದನಾ ಕೃತ್ಯವಲ್ಲವೆಂದು ಬಿಂಬಿಸುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.
Video
ಮಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮಹಮ್ಮದ್ ಶಾರೀಕ್ ಹಿನ್ನಲೆ, ದುರಂತ, ಪೊಲೀಸರ ತನಿಖೆಯ ಆಧಾರದಲ್ಲಿ ಭಯೋತ್ಪಾದನಾ ಕೃತ್ಯವೆಂದೇ ಪೊಲೀಸರೇ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಉಗ್ರಗಾಮಿ ಚಟುವಟಿಕೆ ಪರವಾಗಿದೆ. ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದ ಕಾಂಗ್ರೆಸ್ ಈಗ ದೇಶ ವಿರೋಧಿ ಕಾರ್ಯ ಮಾಡುತ್ತಿದೆ. ಡಿಕೆ ಶಿವಕುಮಾರ್ ಹೇಳಿಕೆ ಭಯೋತ್ಪಾದಕರಿಗೆ ಪ್ರೇರಣೆ ನೀಡಿದೆ ಎಂದರು
ಹಿಂದೆ ಕಾಶ್ಮೀರದ ಕಾಂಗ್ರೆಸ್ ನಾಯಕನೊಬ್ಬ ಭಯೋತ್ಪಾದಕರಿಗೆ ಒಂದು ಕೋಟಿ ರೂ. ಆಫರ್ ನೀಡಿದ್ದ. ಪಿಎಫ್ಐ ಕಾರ್ಯಕರ್ತರ ಕ್ರಿಮಿನಲ್ ಗಳ ಕೇಸ್ ಗಳನ್ನು ಹಿಂಪಡೆದು ಕಾಂಗ್ರೆಸ್ ಬಿ ರಿಪೋರ್ಟ್ ಹಾಕಿತ್ತು. ಮಹಮ್ಮದ್ ಶಾರೀಕ್ ಈ ಹಿಂದೆ ಉಗ್ರರ ಪರ ಗೋಡೆ ಬರಹ ಬರೆದಾಗ ಅವನ ಪರವಾಗಿ ಕಾಂಗ್ರೆಸ್ ಹೇಳಿಕೆ ನೀಡಿತ್ತು. ಮುಂದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಭಯೋತ್ಪಾದನೆಗೆ ಬೆಂಬಲ ನೀಡಲಿದೆ. ಕಾಂಗ್ರೆಸ್ ಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇಲ್ಲ, ಭಯೋತ್ಪಾದಕರ ಮೇಲೆ ಪ್ರೀತಿ ಇದೆ ಎಂದು ಕಿಡಿಕಾರಿದರು.
ವೋಟರ್ ಐಡಿ ಪ್ರಕರಣ ಮುಚ್ಚುವ ಕೆಲಸವನ್ನು ಈ ಹಿಂದೆ ಕಾಂಗ್ರೆಸ್ ಮಾಡಿತ್ತು. ಬಿಜೆಪಿಗೆ ಹಗರಣ ಮುಚ್ಚುವ ಅಗತ್ಯತೆಯಿಲ್ಲ. ಕಾಂಗ್ರೆಸ್ ಕಾಲಘಟ್ಟದಲ್ಲಿ ನಡೆದ ಪಿಎಸ್ಐ ಅಕ್ರಮ ನೇಮಕಾತಿಯ ಕುಳಗಳ ಅರೆಸ್ಟ್ ಆಗಿದೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ವೋಟ್ ಬ್ಯಾಂಕ್ ಗೆ ಚಿಲ್ಲರೆ ರಾಜಕೀಯ ಮಾಡೋದು ಕಾಂಗ್ರೆಸ್ ಕೆಲಸ. ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಮೇಯರ್ ಇದ್ದದ್ದು ತನಿಖೆಯಲ್ಲಿ ಗೊತ್ತಾಗಿದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಯೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿತ್ತು ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.