ಕರಾವಳಿಯ ಕಾರ್ಣಿಕ ಶಕ್ತಿ ಕೊರಗಜ್ಜನ ಆದಿಸ್ಥಳಕ್ಕೆ ಭೇಟಿನೀಡಿದ ಶಿವರಾಜ್ ಕುಮಾರ್ ದಂಪತಿ;ದೈವಕ್ಕೆ ವೀಳ್ಯದೆಲೆ,ಚಕ್ಕುಲಿ ಇಟ್ಟು ಪ್ರಾರ್ಥನೆ ಸಲ್ಲಿಸಿದ ಹ್ಯಾಟ್ರಿಕ್ ಹೀರೋ
Saturday, December 10, 2022
ಉಳ್ಳಾಲ; ಕರಾವಳಿಯ ಕಾರಣಿಕ ಶಕ್ತಿ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿನ ಸ್ಥಾನಕ್ಕೆ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ
ಪತ್ನಿ ಗೀತಾ,ಮಗಳೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಶಿವಣ್ಣ ಕೊರಗಜ್ಜನಿಗೆ ವೀಳ್ಯದೆಲೆ,ಚಕ್ಕುಲಿ ಇಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.ಶಿವಣ್ಣನಿಗೆ ವೇದ ಚಿತ್ರ ತಂಡ ಸಾತ್ ನೀಡಿತ್ತು.
ವೇದ ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಆಗಮಿಸಿರುವ ಶಿವಣ್ಣ ಸಂಜೆ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯಲಿರುವ ವೇದ ಚಿತ್ರದ ಪ್ರಮೋಶನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕುತ್ತಾರು ಕೊರಗಜ್ಜನ ದರ್ಶನ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಿವಣ್ಣ "ಇವತ್ತು ವೇದಾ ಈವೆಂಟ್ ಇರೋ ಕಾರಣ ಮಂಗಳೂರಿಗೆ ಬಂದಿದ್ದೇನೆ.ನಿನ್ನೆ ಧರ್ಮಸ್ಥಳ, ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ.ಕೊರಗಜ್ಜನ ಕ್ಷೇತ್ರದ ಬಗ್ಗೆ ನನಗೆ ರಕ್ಷಿತಾ ಅನೇಕ ಬಾರಿ ಹೇಳಿದ್ದರು.ಅಣ್ಣ ಕೊರಗಜ್ಜ ನ ಬಳಿಗೆ ಹೋಗಿ ಬನ್ನಿ , ಮನುಷ್ಯನ ಸಮಸ್ಯೆಯನ್ನ ಬಹಳ ಸರಳವಾಗಿ ಹೇಳುವ ರೀತಿ ಇದು,ಯಾವುದೇ ಆಡಂಬರ ಇಲ್ಲದೇ ಜನರು ಪ್ರಾರ್ಥನೆ ಮಾಡಲು ಅವಕಾಶ ಇದೆ ಎಂದಿದ್ದರು.ಹಾಗಾಗಿ ಇಲ್ಲಿಗೆ ಬಂದೆ.ವೀಲ್ಯದೆಲೆ ಮತ್ತು ಶರಾಬು ಕೊಟ್ಟು ಪ್ರಾರ್ಥನೆ ಮಾಡುವ ಸರಳ ವಿಧಾನ ಇಲ್ಲಿದೆ" ಎಂದರು
ಮಂಗಳೂರು, ಉಡುಪಿ ಕಡೆ ಸುಮಾರು ಸಿನಿಮಾ ಚಿತ್ರೀಕರಣ ಆಗಿದೆ.ಇವತ್ತು ಕೊರಗಜ್ಜ ಕ್ಷೇತ್ರಕ್ಕೆ ಬಂದು ಬೇಡಿಕೆ ಸಲ್ಲಿಸಿದ್ದೇವೆ.ಮನಸ್ಸಿಗೆ ನೆಮ್ಮದಿ ಇದೆ, ಇಲ್ಲಿಗೆ ಬಂದು ಮನಸ್ಸಲ್ಲಿ ಪ್ರಾರ್ಥನೆ ಸಲ್ಲಿಸಿದೆ.ಇಲ್ಲಿ ಪ್ರಾಮಾಣಿಕ ನಂಬಿಕೆ ಇದೆ, ಪ್ರಾರ್ಥನೆ ಮಾಡೋದು ಆಗುತ್ತೆ ಅನ್ನೋ ನಂಬಿಕೆ ಇದೆ.ಆಗೋದು ಬಿಡೋದು ದೈವದ ಇಚ್ಛೆ, ಆದರೆ ಪ್ರಾರ್ಥನೆ ಮಾಡಬೇಕು ಎಂದರು.