ಬೆಳ್ತಂಗಡಿ: ಯುವ ವಕೀಲನಿಗೆ ಹಲ್ಲೆ ಪ್ರಕರಣ 3ಲಕ್ಷ ಪರಿಹಾರ ನೀಡುವಂತೆ ಪುಂಜಾಲಕಟ್ಟೆ ಎಸ್ಐಗೆ ಹೈಕೋರ್ಟ್ ಆದೇಶ
Friday, January 20, 2023
ಮಂಗಳೂರು: ರಾತ್ರೋರಾತ್ರಿ ಮನೆಗೆ ನುಗ್ಗಿ ದ.ಕ.ಜಿಲ್ಲಾ ಬೆಳ್ತಂಗಡಿ ತಾಲೂಕಿನ ಯುವ ವಕೀಲ ಕುಲದೀಪ್ ಶೆಟ್ಟಿ ಮನೆಗೆ ನುಗ್ಗಿ ಠಾಣೆಗೆ ಎಳೆದೊಯ್ದು ಹಲ್ಲೆ ನಡೆಸಿರುವ ಆರೋಪದಲ್ಲಿ ಪುಂಜಾಲಕಟ್ಟೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸುತೇಶ್ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದ್ದು ಸಂತ್ರಸ್ತ ವಕೀಲನಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಪುಂಜಾಲಕಟ್ಟೆ ಠಾಣೆಯ ಸಬ್ ಇನ್ ಸ್ಪೆಕ್ಟರ್ ಕೆ.ಪಿ.ಸುತೇಶ್ ರಾತ್ರಿ ವೇಳೆ ಏಕಾಏಕಿ ಮನೆಗೆ ನುಗ್ಗಿ ತನ್ನ ಮೇಲೆ ಹಲ್ಲೆ ನಡೆಸಿ ಠಾಣೆಗೆ ಎಳೆದೊದ್ದಿದ್ದಾರೆ. ಆದ್ದರಿಂದ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಹಲ್ಲೆಗೊಳಗಾದ ತನಗೆ ಪರಿಹಾರ ನೀಡಬೇಕು ಎಂದು ಯುವ ವಕೀಲ ಕುಲದೀಪ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಗುರುವಾರ ಈ ತೀರ್ಪು ಪ್ರಕಟಿಸಿದೆ. ಕುಲದೀಪ್ ಶೆಟ್ಟಿಯವರಿಗೆ ನೀಡಬೇಕಾಗಿರುವ ಪರಿಹಾರದ ಮೊತ್ತವನ್ನು ತಪ್ಪಿತಸ್ಥ ಪೊಲೀಸ್ ಅಧಿಕಾರಿಯಿಂದಲೇ ವಸೂಲಿ ಮಾಡಬೇಕು ಎಂದು ಆದೇಶಿಸಿದೆ. ಅಲ್ಲದೆ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕೈಗೊಂಡಿರುವ ಇಲಾಖಾ ವಿಚಾರಣೆಯ ವರದಿಯನ್ನು ಒಂದು ತಿಂಗಳ ಒಳಗೆ ಹೈಕೋರ್ಟಿಗೆ ಸಲ್ಲಿಸಬೇಕೆಂದು ನ್ಯಾಯಾಲಯವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ.