ಮಂಗಳೂರು: ದೇಶದ ಗಣರಾಜ್ಯೋತ್ಸವಕ್ಕೆ ನೌಕಾದಳ ಲೀಡ್ ಮಾಡಲಿದ್ದಾರೆ ಮಂಗಳೂರಿನ ಯುವತಿ

ಮಂಗಳೂರು: ದೇಶದ ಗಣರಾಜ್ಯೋತ್ಸವಕ್ಕೆ ನೌಕಾದಳ ಲೀಡ್ ಮಾಡಲಿದ್ದಾರೆ ಮಂಗಳೂರಿನ ಯುವತಿ


ಮಂಗಳೂರು: ಜ.26ರಂದು ದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ದೇಶದ ಗಣರಾಜ್ಯೋತ್ಸವ ಸಂದರ್ಭ ಈ ಬಾರಿಯೂ ನಾರಿ ಶಕ್ತಿ ಮೇಳೈಸಲಿದೆ. ಕರ್ತವ್ಯಪಥದಲ್ಲಿ ನಡೆಯುವ ಸೇನಾ ಪಡೆಗಳ ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ನೌಕಾದಳವನ್ನು ಭಾರತೀಯ ನೌಕಾಪಡೆಯ ಲೆಪ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಮುನ್ನಡೆಸಲಿದ್ದಾರೆ.

ರಾಜಪಥವು ಕರ್ತವ್ಯಪಥವಾಗಿ ಬದಲಾದ ಬಳಿಕ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿದೆ. ಜ.26ರಂದು ಗಣರಾಜ್ಯೋತ್ಸವದ ಪೆರೇಡ್ ಅನ್ನು ಮುನ್ನಡೆಸುವ ನಿಟ್ಟಿನಲ್ಲಿ ನ.9 ಮತ್ತು 10 ರಂದು ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆಯ್ಕೆಯಾದ ಬಳಿಕ ನ.18ರಿಂದ ತರಬೇತಿ ನೀಡಲಾಗುತ್ತಿದೆ. ದಿಶಾ ಅಮೃತ್ ಮಂಗಳೂರಿನ ಬೋಳೂರು ಬಳಿಯ ತಿಲಕ್ ನಗರದ ಅಮೃತ್ ಕುಮಾರ್ ಹಾಗೂ ಲೀಲಾ ಅಮೃತ್ ದಂಪತಿ ಪುತ್ರಿ. ಅವರಿಗೆ ನೌಕಾ ಪಡೆಯ ಅಧಿಕಾರಿಯಾಗಬೇಕೆಂಬ ಕನಸು ಬಾಲ್ಯದಲ್ಲಿಯೇ ಇತ್ತು. ಈ ನಿಟ್ಟಿನಲ್ಲಿ 8ನೇ ತರಗತಿಯಿಂದಲೇ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿದ್ದರು. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆಯೇ ಅವರು ಹೊಸದಿಲ್ಲಿಯ ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆಯಾಗಿದ್ದರು.

ದಿಶಾ ಅಮೃತ್ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು, ಅಲೋಶಿಯಸ್ ಎನ್‌ಸಿಸಿ ಘಟಕದಲ್ಲಿ ತರಬೇತಿ ಪಡೆಯುತ್ತಿದ್ದರು. ಬಳಿಕ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತಿದ್ದಾರೆ. ಆ ವೇಳೆ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸುತ್ತಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಪ್ರಯತ್ನ ಕೈಬಿಡದೆ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಸದ್ಯ ನೌಕಾಪಡೆಯಲ್ಲಿ ಅಂಡಮಾನ್ ನಿಕೋಬಾರ್‌ನಲ್ಲಿ ಲೆಪ್ಟಿನೆಂಟ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿಯ ಸಾಧನೆಗೆ ದಿಶಾ ಅಮೃತ್ ಹೆತ್ತವರು ಖುಷಿ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article