ಮಂಗಳೂರು: ಫ್ಲವರ್ ಸ್ಟಾಲ್ ನಿಂದ ಕಳವುಗೈದ 9ಲಕ್ಷ ನಗದು ಬಿಲ್ಡಿಂಗ್ ನಡಿಯಲ್ಲಿ ಹೂತಿಟ್ಟ- ಕಳ್ಳ ಸೆರೆ ಸಿಕ್ಕ ಬಳಿಕ ವಿಚಾರ ಬಹಿರಂಗ
Sunday, January 15, 2023
ಮಂಗಳೂರು: ಫ್ಲವರ್ ಸ್ಟಾಲ್ ಗೆ ಕನ್ನ ಹಾಕಿದ ಖದೀಮ ಕಳ್ಳನೋರ್ವನು 9 ಲಕ್ಷ ರೂ ಕಳವುಗೈದು, ಹಳೆಯ ಬಿಲ್ಡಿಂಗ್ ಅಡಿಯಲ್ಲಿ ಹೂತಿಟ್ಟಿದ್ದ. ಈ ಕಳ್ಳನ ಕರಾಮತ್ತು ಆತ ಮತ್ತೊಂದು ಪ್ರಕರಣದಲ್ಲಿ ಸೆರೆ ಸಿಕ್ಕಿ ತನಿಖೆಯ ವೇಳೆ ಬಾಯಿ ಬಿಟ್ಟಾಗಲೇ ಬಯಲಿಗೆ ಬಂದಿರುವ ಪ್ರಕರಣವೊಂದು ಮಂಗಳೂರು ನಗರದಲ್ಲಿ ನಡೆದಿದೆ.
ಬೆಳ್ತಂಗಡಿಯ ಪಡಂಗಡಿ ಗ್ರಾಮದ ಹಮೀದ್ ಕುಂಞಮೋನು ಜಾಫರ್ (48 ) ಸೆರೆ ಸಿಕ್ಕ ಖದೀಮ ಕಳ್ಳ.
ಹಮೀದ್ ಕುಂಞಮೋನು ಜಾಫರ್ 2022 ನವೆಂಬರ್ ಸಂದರ್ಭ ನಗರದ ಕೆಎಸ್ ರಾವ್ ರಸ್ತೆಯ ಬಳಿಯಿರುವ ಉಮ್ಮರಬ್ಬ ಪವರ್ ಸ್ಟಾಲ್ ನಲ್ಲಿ ಸಗಟು ವ್ಯಾಪಾರದಿಂದ ಬಂದ 9ಲಕ್ಷವನ್ನು ಕಳವುಗೈದಿದ್ದ. ಇದರಲ್ಲಿ ಸ್ವಲ್ಪ ಹಣವನ್ನು ತೆಗೆದು ಉಳಿದ ಹಣವನ್ನು ನಗರದ ಪಾಳು ಬಿದ್ದ ಕಟ್ಟಡವೊಂದರ ಬಳಿಯ ಭೂಮಿಯನ್ನು ಅಗೆದು ಭೂಗತ ಮಾಡಿ ಪರಾರಿಯಾಗಿದ್ದ. ಹಣ ಬೇಕೆಂದ ವೇಳೆ ಹೂತಿಟ್ಟಿದ್ದ ಜಾಗದಲ್ಲಿ ಮತ್ತೊಮ್ಮೆ ಬಂದು ನೋಡಿದಾಗ ಸಂಪೂರ್ಣ ಕಟ್ಟಡವನ್ನೇ ನೆಲಸಮ ಮಾಡಲಾಗಿತ್ತು. ಪರಿಣಾಮ ಆತನಿಗೆ ಬಚ್ಚಿಟ್ಟ ಹಣ ಸಿಕ್ಕಿರಲಿಲ್ಲ.
ಇತ್ತ ಕಟ್ಟಡ ನೆಲಸಮ ಮಾಡುವ ವೇಳೆ ಜೆಸಿಬಿ ಡ್ರೈವರ್ ಗೆ ಈ ಈಡುಗಂಟು ದೊರಕಿತ್ತು. ಆತ ಅದನ್ನು ಅನಾಮತ್ತಾಗಿ ಎತ್ತಿಕೊಂಡು ತನ್ನ ಸ್ವಂತಕ್ಕೆ ಬಳಸಿದ್ದ. ಹಣ ಕಳವು ಆಗಿರುವ ಬಗ್ಗೆ ತನಿಖೆ ನಡೆಸಿದ ಮಂಗಳೂರು ಉತ್ತರ ಠಾಣೆ ಪೊಲೀಸರು ನಗರದ ಜ್ಯೋತಿ ಸರ್ಕಲ್ ಬಳಿ ಆರೋಪಿ ಹಮೀದ್ ನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ವೇಳೆ ಹಣ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಜೆಸಿಬಿ ಅಪರೇಟರ್ ಅನ್ನು ಬಂಧಿಸಿರುವ ಪೊಲೀಸರು ಆತನಿಂದ 5.80 ಲಕ್ಷ ರೂ ವಶಕ್ಕೆ ಪಡೆದಿದ್ದಾರೆ. ಕಳವು ಆರೋಪಿ ವಿರುದ್ಧ ಹಮೀದ್ ಕುಂಞಮೋನು ಜಾಫರ್ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 22ಕ್ಕೂ ಹೆಚ್ಚು ಪ್ರಕರಣಗಳು ಮತ್ತು ವಿವಿಧ ನ್ಯಾಯಾಲಯಗಳಲ್ಲಿ 22 ವಾರೆಂಟ್ ಇತ್ತು.