ಮಂಗಳೂರು: ಮುಸ್ಲಿಮರಿಗೆ ವ್ಯಾಪಾರ ನಿಷೇಧಿಸಿರುವುದನ್ನು ಬೆಂಬಲಿಸಿರುವ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮಕ್ಕೆ ಡಿವೈಎಫ್ಐ, ಸಿಪಿಐಎಂ ಆಗ್ರಹ
Saturday, January 14, 2023
ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹೇರಲಾಗಿರುವ ವ್ಯಾಪಾರ ನಿಷೇಧವನ್ನು ಕಾವೂರು ಠಾಣಾ ಪೊಲೀಸರು ಬೆಂಬಲಿಸಿದ್ದಾರೆ. ಇದು ಪೊಲೀಸ್ ನಿಯಮಾವಳಿಗೆ ವಿರೋಧವಾಗಿದೆ. ತಕ್ಷಣ ಪೊಲೀಸ್ ಕಮಿಷನರ್ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಬ್ಯಾನರ್ ತೆರವು ಮಾಡಬೇಕು. ಅಲ್ಲದೆ ಬೇಜವಾಬ್ದಾರಿಯಿಂದ ವರ್ತಿಸಿರುವ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ, ಸಿಪಿಐಎಂ ಆಗ್ರಹಿಸಿದೆ.
ಕಾವೂರು ಠಾಣಾ ವ್ಯಾಪ್ತಿಯಲ್ಲಿರುವ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿ ಬ್ಯಾನರ್ ಅಳವಡಿಸಲಾಗಿತ್ತು. ಈ ಬ್ಯಾನರ್ ಅನ್ನು ಕಾವೂರು ಠಾಣಾ ಪೊಲೀಸರು ಹಾಗೂ ಎಸಿಪಿಯವರಿಗೆ ತಿಳಿಸಿ ತೆಗೆಸಲಾಗಿತ್ತು. ಜಾತ್ರೋತ್ಸವ ಆರಂಭದ ದಿನವಾದ ಇಂದು ಮತ್ತೆ ಈ ಬ್ಯಾನರ್ ಕಂಡು ಬಂದಿದೆ. ಇದನ್ನು ಮತ್ತೆ ಕಾವೂರು ಠಾಣಾ ಪೊಲೀಸರ ಗಮನಕ್ಕೆ ತರಲಾಗಿದೆ. ಆದರೆ ಪೊಲೀಸ್ ಸಿಬ್ಬಂದಿಯೊಬ್ಬರು 'ಇದು ಆಡಳಿತ ಸಮಿತಿಯ ನಿರ್ಧಾರ' ಎಂದು ಹೇಳಿದ್ದಾರೆ.
ಆದರೆ ಬ್ಯಾನರ್ ನಲ್ಲಿ ಆಡಳಿತ ಸಮಿತಿಯ ಹೆಸರಿಲ್ಲ. ಬದಲಾಗಿ ಬಜರಂಗದಳ ಹಾಗೂ ವಿಎಚ್ ಪಿ ಹೆಸರು ಇದೆ. ಆದ್ದರಿಂದ ಈ ಬ್ಯಾನರ್ ತೆಗೆಯದಿದ್ದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರೆ, 'ಪ್ರತಿಭಟನೆ ನಡೆಸಿ ತೊಂದರೆಯಿಲ್ಲ' ಎಂಬ ಉತ್ತರ ಪೊಲೀಸ್ ಸಿಬ್ಬಂದಿಯಿಂದ ಬಂದಿದೆ. ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರಿಸಿರುವುದನ್ನು ಪೊಲೀಸ್ ಸಿಬ್ಬಂದಿ ಬೆಂಬಲಿಸಿರುವುದು ಪೊಲೀಸ್ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ತಕ್ಷಣ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಬ್ಯಾನರ್ ತೆರವು ಮಾಡಬೇಕು. ಅಲ್ಲದೆ ಬೇಜವಾಬ್ದಾರಿಯಿಂದ ವರ್ತಿಸಿರುವ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ, ಸಿಪಿಐಎಂ ಆಗ್ರಹಿಸಿದೆ.