ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಥಳಿತ;ದ.ಕ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಘಟನೆ.
Friday, January 6, 2023
ಮಂಗಳೂರು: ಹಿಂದೂ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಸಾರ್ವಜನಿಕರು ಸೇರಿ ಬೇಕಾಬಿಟ್ಟಿ ಥಳಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ನಡೆದಿದೆ.
ದಕ್ಷಿಣ ಕನ್ನಡದ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಯುವಕನೊಬ್ಬ ಅಪ್ರಾಪ್ತ ಹಿಂದು ಹುಡುಗಿ ಜತೆ ತಿರುಗಾಡುತ್ತಿರುವುದು ಕಂಡ ಸ್ಥಳೀಯರು ಆತನನ್ನು ಪ್ರಶ್ನಿಸಿದ್ದಾರೆ. ಆತ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಚೆನ್ನಾಗಿ ಥಳಿಸಿದ್ದಾರೆ. ಯುವಕ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆಗೈದವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾನೆ.
ಯುವಕ ಮತ್ತು ಅಪ್ರಾಪ್ತ ಹುಡುಗಿ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಕುಳಿತು ತುಂಬಾ ಹೊತ್ತು ಮಾತನಾಡುತ್ತಿದ್ದುದನ್ನು ಕಂಡು ಜನರಿಗೆ ಸಂಶಯ ಬಂದಿದೆ. ಅಲ್ಲದೆ ಈ ಜೋಡಿ ಅತ್ತಿಂದಿತ್ತ ಓಡಾಡುತ್ತಿತ್ತು. ಬಳಿಕ ಈ ಜೋಡಿ ಕುಮಾರಧಾರಾ ನದಿ ಬಳಿ ಬಂದಾಗ ಬೆನ್ನಟ್ಟಿ ಬಂದ ಗುಂಪು ಯುವಕನಿಗೆ ಹಲ್ಲೆಮಾಡಿದೆ.
ಥಳಿತಕ್ಕೊಳಗಾದ ಯುವಕ ಸುಳ್ಯ ಕಲ್ಲುಗುಂಡಿ ನಿವಾಸಿ ಅಫೀದ್ ಎಂದು ತಿಳಿದು ಬಂದಿದೆ. ಯುವಕನ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಫೀದ್ ಜತೆ ಬಂದಿರುವ ಹುಡುಗಿ ಅಪ್ರಾಪ್ತ ವಯಸ್ಸಿನವಳೆಂದು ತಿಳಿದುಬಂದಿದ್ದು ಅಫೀದ್ ಬಾಲಕಿಯನ್ನು ಪುಸಲಾಯಿಸಿ ಹೀಗೆ ಕರೆದುಕೊಂಡು ಬಂದಿರುವುದಾಗಿ ಆಕೆಯ ಪೋಷಕರೂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಯುವಕನ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿರುವ ಸುಬ್ರಹ್ಮಣ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.