ಮಂಗಳೂರು : ಯಾವುದೇ ಪ್ರಲೋಭನೆ, ಬೆದರಿಕೆಗೆ ಜಗ್ಗದೆ ಪಾದಯಾತ್ರೆ ನಡೆದೇ ನಡೆಯುತ್ತದೆ; ಶ್ರೀ ಪ್ರಣವಾನಂದ ಸ್ವಾಮೀಜಿ
Thursday, January 5, 2023
ಮಂಗಳೂರು: ಬಿಲ್ಲವ ಸಮುದಾಯದ ಏಳಿಗೆಗಾಗಿ ಮಂಗಳೂರಿನಿಂದ ಬೆಂಗಳೂರುವರೆಗೆ ನಡೆಯುವ ನಾಳೆಯ ಪಾದಯಾತ್ರೆಯು ಯಾವುದೇ ಪ್ರಲೋಭನೆ, ಬೆದರಿಕೆಗೂ ಜಗ್ಗದೆ ನಡೆದೇ ನಡೆಯುತ್ತದೆ ಎಂದು ನಾರಾಯಣ ಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪಾದಯಾತ್ರೆಯನ್ನು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1ಕ್ಕೆ ಪಾದಯಾತ್ರೆ ಆರಂಭವಾಗಿ 13 ಕಿ.ಮೀ. ಮುಂದುವರಿಯಲಿದೆ. ಇದೇ ರೀತಿ ಪಾದಯಾತ್ರೆ 40 ದಿನಗಳಲ್ಲಿ 647 ಕಿ.ಮೀ. ದೂರ ಕ್ರಮಿಸಿ ಬೆಂಗಳೂರು ತಲುಪಲಿದೆ ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ನಿಗಮ ಸೇರಿದಂತೆ ಕ್ಯಾಬಿನೆಟ್ ನಲ್ಲಿ ಅನುಮೋದನೆಗೊಳ್ಳಬೇಕಾದ 10 ಬೇಡಿಕೆಗಳನ್ನು ಮುಂದಿರಿಸಿಕೊಂಡು ಪಾದಯಾತ್ರೆ ಮಾಡಲಾಗುತ್ತಿದೆ. ಇದು ಸರಕಾರದ ವಿರುದ್ಧವಾಗಿಯೂ, ಯಾವುದೇ ಪಕ್ಷದ ಪರವಾಗಿ ಮಾಡುವ ಪಾದಯಾತ್ರೆಯಲ್ಲ. ನಮ್ಮ ಬೇಡಿಕೆಗಳ ಈಡೇರಿಕೆಗೆ ಮಾಡುವ ಈ ಪಾದಯಾತ್ರೆಗೆ 1.50 ಕೋಟಿ ರೂ. ವೆಚ್ಚವಾಗಲಿದೆ. ಆದರೆ ಪಾದಯಾತ್ರೆ ನಮ್ಮ ಸಮುದಾಯದ ದೇಣಿಗೆಯಿಂದ ನಡೆಯುತ್ತದೆಯೇ ಹೊರತು ಯಾವುದೇ ರಾಜಕೀಯ ಪಕ್ಷಗಳ ದುಡ್ಡಿನಿಂದ ಆಗುವುದಿಲ್ಲ. ನಾನು ಇದನ್ನು ಸಮಾಜದಲ್ಲಿ ಸ್ಥಾನಮಾನ ದೊರಕುತ್ತದೆ, ಎಂಪಿ, ಎಂಎಲ್ಎ ಸೀಟ್ ನ ಆಸೆಗೆ ಮಾಡುವುದುಲ್ಲ. ಆದರೆ ಈ ಪಾದಯಾತ್ರೆಯನ್ನು ಹತ್ತಿಕ್ಕುವ ಉದ್ದೇಶದಿಂದ ನನಗೆ ಈಗಾಗಲೇ ಸಾಕಷ್ಟು ಬೆದರಿಕೆಗಳು ಬಂದಿವೆ. ಆದರೆ ಇದಾವುದಕ್ಕೂ ಜಗ್ಗದೆ ನನಗೆ ಸಾವು ಎದುರಾದರೂ ನಾನೋರ್ವನಾದರೂ ಈ ಪಾದಯಾತ್ರೆಯನ್ನು ನಡೆಸುವುದು ನಡೆಸುವುದೇ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.