ಮಂಗಳೂರು: ಮಗುವಿನ ಮುಗ್ಧ ಪ್ರೀತಿಗೆ ಮನಸೋತ ದೈವ - ವೈರಲ್ ಆಯ್ತು ವೀಡಿಯೋ
Saturday, January 28, 2023
ಮಂಗಳೂರು: 'ಪೆದ್ದಿ ಅಪ್ಪೆ ಆದ್ ತಾಂಕಿ ತಮ್ಮಲೆ ಆದ್ ರಕ್ಷಣೆ ಮಲ್ತೊಂದು ಬರ್ಪೆ' ಅಂದರೆ 'ಹೆತ್ತ ತಾಯಿಯಂತೆಯೂ ಸಾಕಿ ಸಲಹಿದ ಮಾವನಂತೆಯೂ ರಕ್ಷಣೆ ಮಾಡುತ್ತಾ ಬರುತ್ತೇನೆ ಇದು ದೈವದ ಸಾಮಾನ್ಯ ಅಭಯ ನುಡಿ. ಇಲ್ಲೊಂದು ಕಡೆಯಲ್ಲಿ ವಾತ್ಸಲ್ಯಮಯಿ ತಾಯಿಯಂತೆಯೂ, ತುಂಟ ಮಾವನಂತೆಯೂ ಮಗುವಿನೊಂದಿಗೆ ದೈವವೇ ಕ್ಷಣ ಕಾಲ ಬೆರೆತು ಕಲೆತ ಅಪರೂಪದ ದೃಶ್ಯವೊಂದು ವೈರಲ್ ಆಗಿದೆ. ಈ ವೀಡಿಯೋ ಇದೀಗ ಎಲ್ಲರ ವಾಟ್ಸ್ಆ್ಯಪ್ ಸ್ಟೇಟಸ್ ಗಳಲ್ಲಿ ರಾರಾಜಿಸುತ್ತಿದೆ.
ಮಂಗಳೂರಿನ ಬಿಕರ್ನಕಟ್ಟೆಯ ಬಜ್ಜೋಡಿಯಲ್ಲಿ ಗುರುವಾರ ದೊಂಪದಬಲಿ ನಡೆದಿದೆ. ಈ ವೇಳೆ ಕಾಂತೇರಿ ಜುಮಾದಿ ದೈವವು ನೇಮ ಸುಮಾರು 11ಗಂಟೆ ಸುಮಾರಿಗೆ ನಡೆಯುತ್ತಿತ್ತು. ದೈವವು ಬೇಟೆಯ ಪರಿಕಲ್ಪನೆಯನ್ನು ನರ್ತನದ ಮೂಲಕ ಬಿಂಬಿಸುತ್ತಿದ್ದ ವೇಳೆ ಅಲ್ಲಿಯೇ ನೆಲದಲ್ಲಿ ಕುಳಿತು ಮಗುವೊಂದು ಸ್ವೀಟ್ ಕಾರ್ನ್ ತಿನ್ನುತ್ತಾ ನೇಮ ವೀಕ್ಷಿಸುತ್ತಿತ್ತು. ನೇರ ಅಲ್ಲಿಗೆ ಬಂದ ಕಾಂತೇರಿ ಜುಮಾದಿ ದೈವ ತನಗೂ ತಿನಿಸು ಕೊಡುವಂತೆ ಕೈ ಚಾಚಿದೆ.
ದೈವ ತನ್ನಲ್ಲಿಗೆ ಬಂದಾಗ ಕೊಂಚವೂ ಭೀತಿಗೊಳಗಾಗದ ಮಗು ಮುಗ್ಧತೆಯಿಂದ ಚಮಚದಲ್ಲಿ ಸ್ವೀಟ್ ಕಾರ್ನ್ ನೀಡಲು ಯತ್ನಿಸಿದೆ. ಆದರೆ ಅದು ಕೆಳಗಡೆ ಬಿದ್ದಿದೆ. ಈ ವೇಳೆ ದೈವ ನೇಮ ವೀಕ್ಷಣೆ ಮಾಡುವ ಭಕ್ತರತ್ತ ನೋಡಿ 'ತನಗೆ ಹಸಿವಾಗಿದೆ, ಮಗು ಏನೋ ಕೊಡುತ್ತಿದೆ' ಎಂದು ನಟಿಸಿ ತೋರಿಸಿ, ಮತ್ತೆ ಮಗುವಿನತ್ತ ಕೈಯೊಡ್ಡಿದೆ. ಆಗಲೂ ಸ್ವೀಟ್ ಕಾರ್ನ್ ನೀಡಲು ಹೋದ ಮಗುವಿನ ಮುಗ್ಧತೆಗೆ ತಲೆದೂಗಿದ ದೈವ ತನ್ನ ಹಣೆಯ ಬಣ್ಣವನ್ನೇ ಮಗುವಿನ ಹಣೆಗೆ ಆಶೀರ್ವಾದ ಪೂರ್ವಕವಾಗಿ ತಿಲಕವಿರಿಸಿದೆ.
ಈ ಸಂಪೂರ್ಣ ದೃಶ್ಯವು ಅಲ್ಲಿಯೇ ಇದ್ದವರೊಬ್ಬರ ಮೊಬೈಲ್ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ದೈವ ಹಾಗೂ ಮಗುವಿನ ನಡುವೆ ನಡೆದ ಈ ಮುಗ್ಧ ಮೌನ ಸಂಭಾಷಣೆಗೆ ಫಿದಾ ಆಗಿರುವ ಕರಾವಳಿಗರ ಮೊಬೈಲ್ ಸ್ಟೇಟಸ್ ನಲ್ಲಿ ಇದೀಗ ಈ ವೀಡಿಯೋ ರಾರಾಜಿಸುತ್ತಿದೆ. ಅಂದ ಹಾಗೆ ಆ ಮಗುವಿನ ಹೆಸರು ಶಮಿತ್. ಎರಡೂವರೆ ವರ್ಷದ ಈ ಬಾಲಕ ಶಕ್ತಿನಗರ, ಪ್ರಶಾಂತಿ ನಗರದ ದೀಪಕ್ ಹಾಗೂ ದೀಪ್ತಿ ದಂಪತಿಯ ಪುತ್ರ.