ಬೆಳ್ತಂಗಡಿ: ಮನೆಯೊಂದರ ಶೌಚಾಲಯಕ್ಕೆ ಹೋದ ವಿದ್ಯಾರ್ಥಿನಿ ಮರಳಿ ಬರಲೇ ಇಲ್ಲ - ಅಸಹಜ ಸಾವು ದಾಖಲು
Saturday, January 28, 2023
ಬೆಳ್ತಂಗಡಿ: ಶಾಲೆಗೆಂದು ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅಸಹಜ ರೀತಿಯಲ್ಲಿ ಮೃತಪಟ್ಟ ಘಟನೆ ಶನಿವಾರ ಗೇರುಕಟ್ಟೆ ಎಂಬಲ್ಲಿ ಸಂಭವಿಸಿದೆ.
ಬೆಳ್ತಂಗಡಿಯ ಕುಪ್ಪೆಟ್ಟಿ ನಿವಾಸಿ ಅಬ್ದುರಝಾಕ್ ಎಂಬವರ ಪುತ್ರಿ ಆಸಿಫಾ(16) ಮೃತಪಟ್ಟ ಬಾಲಕಿ.
ಗೇರುಕಟ್ಟೆಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆಸಿಫಾ ಇಂದು ಬೆಳಗ್ಗೆ ಗೇರುಕಟ್ಟೆ ನಿಲ್ದಾಣದಲ್ಲಿ ಬಸ್ ಇಳಿದು ಶಾಲೆಗೆಂದು ತೆರಳುತ್ತಿದ್ದರು. ಈ ವೇಳೆ ಆಸಿಫಾ ಅಲ್ಲಿಯೇ ಸಮೀಪವಿರುವ ಮನೆಯೊಂದಕ್ಕೆ ತೆರಳಿ ಶೌಚಾಲಯಕ್ಕೆ ತೆರಳಿದ್ದಾಳೆ. ಆದರೆ ಬಹಳ ಹೊತ್ತಾದರೂ ಶೌಚಾಲಯಕ್ಕೆ ಹೋದವಳು ಹೊರಬರಲೇ ಇಲ್ಲ ಎನ್ನಲಾಗಿದೆ.
ಮನೆಯವರು ಹೊರಗಿನಿಂದ ಎಷ್ಟು ಕರೆದರೂ ಯಾವುದೇ ಉತ್ತರ ಬಾರದಿದ್ದ ವೇಳೆ ಅವರು ಶಾಲೆಯವರಿಗೆ, ಸ್ಥಳೀಯ ಗ್ರಾಪಂ ಸದಸ್ಯ ಅಬ್ದುಲ್ ಕರೀಂ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶೌಚಾಲಯದ ಬಾಗಿಲು ಮುರಿದು ನೋಡಿದ ವೇಳೆ ವಿದ್ಯಾರ್ಥಿನಿ ನರಳಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಆಕೆಯನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ.