ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ; ಅತ್ಯಾಚಾರಿಗೇ ಮದುವೆ ಮಾಡಿಸಿದ ಹುಡುಗಿ ತಂದೆ-ಪ್ರಕರಣ ಸಂಬಂಧ ಮೂವರ ಬಂಧನ
Wednesday, January 25, 2023
ತಿರುವನಂತಪುರ; 16 ವರ್ಷದ ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರಗೈದು ಪೋಸ್ಕೋ ಪ್ರಕರಣ ಎದುರಿಸುತ್ತಿರುವ ಆರೋಪಿಯೇ ಆಕೆಯನ್ನು ಮದುವೆಯಾಗಿದ್ದು, ಈ ಸಂಬಂಧ ಪೊಲೀಸರು ಮದುಮಗ, ಹುಡುಗಿ ತಂದೆ ಹಾಗೂ ಮದುವೆ ಮಾಡಿಸಿದ ಉಸ್ತಾರನ್ನು ಬಂಧಿಸಿದ್ದಾರೆ.
ಮದುಮಗ 23 ವರ್ಷದ ಅಲ್ ಅಮೀರ್, ಮದುವೆಯನ್ನು ನಿರ್ವಹಿಸಿದ್ದ ಉಸ್ತಾದ್ ಅನ್ವರ್ ಸಾದಾತ್ ಮತ್ತು ಮದುಮಗಳ ತಂದೆಯೂ ಬಂಧನಕ್ಕೊಳಗಾದವರು.
2021ರಲ್ಲಿ ಅಲ್ ಅಮೀರ್, ಅದೇ ಅಪ್ರಾಪ್ತ ಯುವತಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಪೋಕ್ಸೊ ಪ್ರಕರಣ ದಾಖಲಾಗಿ ನಾಲ್ಕು ತಿಂಗಳು ಜೈಲಿನಲ್ಲಿದ್ದ ಅಮೀರ್ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ.
ಆದರೆ ಜಾಮೀನಲ್ಲಿ ಹೊರಬಂದರೂ, ಹುಡುಗಿಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ಎಸಗುತ್ತಿದ್ದ. ಇದರಿಂದ ಬೇಸತ್ತ ಹುಡುಗಿಯ ತಂದೆ, ಮಗಳನ್ನು ಆತನಿಗೇ ಕೊಟ್ಟು ಮದುವೆ ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಆಕೆಯ ಶಾಲೆಗೆ ಹೋಗುವುದನ್ನು ನಿಲ್ಲಿಸುವಂತೆ ಮಾಡಿದ್ದಾರೆ. ಮೊನ್ನೆ ಜನವರಿ 18ರಂದು ಹುಡುಗಿಯನ್ನು ಅಮೀರನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಆದರೆ ಹುಡುಗಿ ಹಲವು ದಿನಗಳಿಂದ ಶಾಲೆಗೆ ಬಾರದೇ ಇದ್ದುದರಿಂದ ಶಿಕ್ಷಕರು ಮಾಹಿತಿ ಕೆದಕಿದಾಗ ಮದುವೆ ಮಾಡಿಸಿದ್ದು ಗೊತ್ತಾಗಿದೆ. ಅಪ್ರಾಪ್ತ ಹುಡುಗಿಯನ್ನು
ಮದುವೆ ಮಾಡಿಸಿದ್ದಕ್ಕೆ ಪೊಲೀಸರ ಗಮನಕ್ಕೆ ತಂದಿದ್ದರು.ಕೂಡಲೇ ಪೊಲೀಸರು ಆರೋಪಿ ಅಲ್ ಅಮೀರ್, ಮದುವೆ ಮಾಡಿಸಿದ ಉಸ್ತಾದ್ ಮತ್ತು ಹುಡುಗಿಯ ತಂದೆಯನ್ನು ಬಂಧಿಸಿದ್ದಾರೆ.