ಮಂಗಳೂರು: ರಾಜ್ಯದಲ್ಲಿ ಈ ಬಾರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ - ಪರಮೇಶ್ವರ್ ಭವಿಷ್ಯ
Saturday, January 21, 2023
ಮಂಗಳೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ. ಸಮ್ಮಿಶ್ರ ಸರ್ಕಾರವೂ ಆಗದೆ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಮಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಭವಿಷ್ಯ ನುಡಿದರು.
ಚುನಾವಣಾ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿರುವ ಅವರು ಇಂದು ದ.ಕ.ಜಿಲ್ಲಾ ಪ್ರವಾಸದಲ್ಲಿದ್ದು, ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಭಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ಕರಾವಳಿ ಕರ್ನಾಟಕಕ್ಕೆ ವಿಶೇಷ ಒತ್ತು ನೀಡುತ್ತೇವೆ. ಬಿಜೆಪಿ ಆಡಳಿತ ಕರಾವಳಿಯಲ್ಲಿ ಸಮುದಾಯಗಳ ನಡುವೆ ಸಾಮರಸ್ಯ ಇಲ್ಲದಂತೆ ಮಾಡಿದೆ. ಇದು ಕೈಗಾರಿಕೆಗಳು ತಲೆಯೆತ್ತಲು, ಮೂಲಸೌಕರ್ಯಗಳ ಅಭಿವೃದ್ಧಿಗೆ ತೊಡಕಾಗಿದೆ. ಆದ್ದರಿಂದ ಕೋಮುಸೌಹಾರ್ದ ವಿಚಾರವೂ ಪ್ರಣಾಳಿಕೆಯಲ್ಲಿ ಇರುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ, ಚಿತ್ರದುರ್ಗಗಳಲ್ಲಿ ಘೋಷಣೆ ಮಾಡಿರುವ ಹತ್ತು ಅಂಶಗಳ ಪ್ರಣಾಳಿಕೆ, ಬೆಳಗಾವಿಯಲ್ಲಿ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್, ಮನೆಯೊಡತಿಗೆ 2,000 ರೂ. ಘೋಷಣೆ ಇಷ್ಟೂ ಅಂಶಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇರುತ್ತದೆ ಎಂದು ಪರಮೇಶ್ವರ್ ಹೇಳಿದರು.
ಬಹಳ ಎಚ್ಚರಿಕೆಯಿಂದ ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಆಪರೇಷನ್ ಕಮಲದಲ್ಲಿ ಖರೀದಿಯಾಗುತ್ತಾರೆ ಎಂದು ಅನುಮಾನವಿರುವ ಅಭ್ಯರ್ಥಿಗಳಿಗೆ ಈ ಬಾರಿ ಟಿಕೆಟ್ ಕೊಡುವುದಿಲ್ಲ. ಬಿಜೆಪಿ 17 ಶಾಸಕರನ್ನು ಖರೀದಿ ಮಾಡುವಷ್ಟು ಕೀಳುಮಟ್ಟಕ್ಕೆ ಹೋಗುತ್ತಾರೆಂದು ನಾವು ನಿರೀಕ್ಷಿಸಿರಲಿಲ್ಲ. ಆದ್ದರಿಂದ ನಾವೂ ಪಾಠ ಕಲಿತಿದ್ದೇವೆ. ಆದ್ದರಿಂದ ಚುನಾವಣೆಯಲ್ಲಿ ನಾವು ಗೆದ್ದ ಬಳಿಕ ಏನು ಮಾಡಬೇಕೋ ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ.
ಕಾಂಗ್ರೆಸ್ ನಲ್ಲಿ ಒಳಜಗಳ ಇಲ್ಲ. ಆದರೆ ಭಿನ್ನ ಅಭಿಪ್ರಾಯ ಇದೆ. ಒಂದು ವಿಚಾರಕ್ಕೆ ವಿಧವಿಧವಾದ ಅಭಿಪ್ರಾಯ ವ್ಯಕ್ತವಾಗೋದು ಸಹಜ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶವಿದೆ. ದ.ಕ.ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ. ಅರ್ಜಿ ಹಾಕಿದವರಲ್ಲದೆ ಗೆಲ್ಲುವ ನಿರೀಕ್ಷೆಯಿದ್ದವರು, ಸಮರ್ಥರನ್ನು ನಾವು ಗುರುತಿಸಿ ಟಿಕೆಟ್ ನೀಡಲಿದ್ದೇವೆ. ಬಿಜೆಪಿಯಿಂದ ಬಂದವರಾದಲ್ಲಿ ಅವರಿಗೆ ಟಿಕೆಟ್ ಕೊಡೊದಿಲ್ಲ. ಮೊದಲು ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿದಲ್ಲಿ 2 ವರ್ಷಗಳು ನೋಡಿ ಆ ಬಳಿಕ ಟಿಕೆಟ್ ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.