ಮಂಗಳೂರು: ಹೊರರಾಜ್ಯದ ಲಾಟರಿ ಮಾರಾಟ ದಂಧೆಯನ್ನು ತಡೆಗಟ್ಟಲು ಫ್ಲಯಿಂಗ್ ಸ್ಕ್ವಾಡ್ ಮತ್ತೆ ಆ್ಯಕ್ಟಿವ್
Thursday, January 12, 2023
ಮಂಗಳೂರು: ನೆರೆರಾಜ್ಯ ಮತ್ತು ಹೊರರಾಜ್ಯಗಳ ಲಾಟರಿ ಮಾರಾಟವನ್ನು ರಾಜ್ಯದಲ್ಲಿ ತಡೆಗಟ್ಟಲು ದ.ಕ.ಜಿಲ್ಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅನ್ನು ಮತ್ತೆ ಆ್ಯಕ್ಟಿವ್ ಮಾಡಲು ಇಂದು ದ.ಕ.ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕರ್ನಾಟಕ ರಾಜ್ಯವನ್ನು ಲಾಟರಿ ಮುಕ್ತವಲಯವನ್ನಾಗಿ ಘೋಷಿಸಲಾಗಿತ್ತು. ಆದರೂ ನೆರೆರಾಜ್ಯ ಮತ್ತು ಹೊರ ರಾಜ್ಯಗಳ ಲಾಟರಿ ಮಾರಾಟವನ್ನು ರಾಜ್ಯದಲ್ಲಿ ತಡೆಗಟ್ಟಲು ಈ ಹಿಂದೆಯೇ ದ.ಕ.ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಫ್ಲೈಯಿಂಗ್ ಸ್ಟ್ಯಾಡ್‌ನ್ನು ಪುನರ್‌ರಚಿಸಲಾಗಿತ್ತು. ಇಂದು ಈ ಫ್ಲೈಯಿಂಗ್ ಸ್ಕ್ವಾಡ್ ಆ್ಯಕ್ಟಿವ್ ಮಾಡಿಸಲು ದ.ಕ.ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಫೈಯಿಂಗ್ ಸ್ಕ್ಯಾಡ್ ಗೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅಧ್ಯಕ್ಷರಾದರೆ, ಮಂಗಳೂರು ಪೊಲೀಸ್ ಅಯುಕ್ತರು, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹಾಗೂ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಇನ್‌ಚಾರ್ಜ್ ಜಾರಿಗೊಳಿಕೆ ವಿಭಾಗದ ಆಧಿಕಾರಿ ಸದಸ್ಯರನ್ನಾಗಿ ಮಾಡಲಾಯಿತು. ಜೊತೆಗೆ ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸದಸ್ಯ ಸಮಾವೇಶಕರರಾಗಿ ಮಾಡಲಾಗಿದೆ. ಇವರು ದ.ಕ.ಜಿಲ್ಲೆಯಲ್ಲಿ ಯಾವುದೇ ತರಹದ ನೆರೆ ರಾಜ್ಯ ಹಾಗೂ ಹೊರ ರಾಜ್ಯಗಳ ಲಾಟರಿ ಟಿಕೇಟ್ ಗಳ ಮಾರಾಟದ ನಿಯಂತ್ರಣ ಮಾಡಬೇಕು.
ಅಲ್ಲದೆ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಎಫ್.ಐ.ಆರ್. ದಾಖಲಿಸುವುದು ಫೈಯಿಂಗ್ ಸ್ಕ್ಯಾಡ್‌ನ ಕರ್ತವ್ಯವಾಗಿರುತ್ತದೆ. ಜಿಲ್ಲೆಯ ಯಾವುದೇ ಲಾಟರಿ ದಂಧೆ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಪ್ಲೆಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರು ಕೂಡ ಲಾಟರಿ ದಂಧೆ ಹಾವಳಿಯನ್ನು ತಪ್ಪಿಸುವಲ್ಲಿ ಫೈಯಿಂಗ್ ಸ್ಕ್ಯಾಡ್‌ನೊಂದಿಗೆ ಸಹಕರಿಸಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.