ಮಂಗಳೂರು: ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಘಮಲು ಪ್ರಕರಣದಲ್ಲಿ ಮತ್ತಿಬ್ಬರು ಅರೆಸ್ಟ್ -ಬಂಧಿತರ ಸಂಖ್ಯೆ 15ಕ್ಕೆ ಏರಿಕೆ
Thursday, January 12, 2023
ಮಂಗಳೂರು: ವೈದ್ಯರು ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಓರ್ವ ವೈದ್ಯ ಹಾಗೂ ಓರ್ವ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿ ಸೇರಿ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 15ಕ್ಕೆ ಏರಿದೆ.
ಮೂಲತಃ ಬೆಂಗಳೂರು ಹಲ್ಸೂರು ನಿವಾಸಿ, ನಗರದ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಮಾಡುತ್ತಿರುವ ವೈದ್ಯ ಡಾ.ಬಾಲಾಜಿ (29), ಮೂಲತಃ ಆಂಧ್ರಪ್ರದೇಶದ ಅನಸ್ತೇಶಿಯಾ ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವ ಡಾ.ರಾಘವ ದತ್ತಾ(28) ಬಂಧಿತ ಆರೋಪಿಗಳು.
ಈ ಪ್ರಕರಣದಲ್ಲಿ ಬಂಧಿತ ವೈದ್ಯ ಬಾಲಾಜಿ ಫಳ್ನೀರ್ ನಲ್ಲಿ ವಾಸ್ತವ್ಯವಿದ್ದನು. ಈತ ತಾನು ವಾಸ್ತವ್ಯವಿರುವ ಮನೆಯಲ್ಲಿಯೇ ಸಣ್ಣಮಟ್ಟಿನ ಪಾರ್ಟಿ ಆಯೋಜಿಸಿ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದರು.
ಈ ಪ್ರಕರಣದಲ್ಲಿ ಈಗಾಗಲೇ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 13 ಮಂದಿಯನ್ನು ಬಂಧಿಸಲಾಗಿತ್ತು. ಈ ಗಾಂಜಾ ಪ್ರಕರಣದ ಕಿಂಗ್ ಪಿನ್ ಯುಕೆ ಮೂಲದ ನೀಲ್ ಕಿಶೋರಿಲಾಲ್ ರಾಮ್ ಜಿಯನ್ನು ವಾರದ ಹಿಂದೆ ಬಂಟ್ಸ್ ಹಾಸ್ಟೆಲ್ ನ ಅಪಾರ್ಟ್‌ಮೆಂಟ್ ನಿಂದ ಬಂಧಿಸಲಾಗಿತ್ತು. ಈತ ಎನ್ಆರ್ ಐ ಕೋಟದಲ್ಲಿ ಮಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಈತ ನೀಡಿರುವ ಮಾಹಿತಿಯ ಜಾಡು ಹಿಡಿದು ಹೊರಟ ಪೊಲೀಸರು ಇದರ ಹಿಂದಿರುವ ಭಾರೀ ದೊಡ್ಡ ಜಾಲವನ್ನೇ ಬೇಧಿಸಿದ್ದಾರೆ.