ಮಂಗಳೂರು: ಪ್ರೇಮಿಗಳ ದಿನಾಚರಣೆಗೆ ಕಾನೂನುಬದ್ಧ ತಡೆ - ಪ್ರಮೋದ್ ಮುತಾಲಿಕ್
Monday, February 13, 2023
ಮಂಗಳೂರು: ಪ್ರತಿಬಾರಿಯಂತೆ ಪ್ರೇಮಿಗಳ ದಿನಾಚರಣೆಗೆ ಈ ಬಾರಿಯೂ ನಮ್ಮ ವಿರೋಧವಿದೆ. ಆದ್ದರಿಂದ ನಾಳೆಯೂ ರಾಜ್ಯಾದ್ಯಂತ ಪೊಲೀಸರೊಂದಿಗೆ ಪ್ರೇಮಿಗಳ ದಿನದ ನೆಪದಲ್ಲಿ ಅನೈತಿಕತೆ ನಡೆಯುವುದನ್ನು ಕಾನೂನು ಬದ್ದವಾಗಿ ತಡೆಯುತ್ತೇವೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
ಮಂಗಳೂರು ನಗರದ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು, ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಅನೈತಿಕತೆ, ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾಕ್ಕೆ ಅವಕಾಶ ನೀಡುವುದಿಲ್ಲ. ನಡೆದಲ್ಲಿ ಕಾನೂನುಬದ್ಧವಾಗಿ ನಾವು ತಡೆದೇ ತಡೆಯುತ್ತೇವೆ ಎಂದು ಮುತಾಲಿಕ್ ಹೇಳಿದರು.
*ಬಜೆಟ್ ನಲ್ಲಿ ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಘೋಷಣೆಯಾಗಲಿ*
ರಾಜ್ಯದಲ್ಲಿ 34,500 ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಗೊಂಡಿದೆ. ಈ ದೇವಸ್ಥಾನಗಳಿಂದ 1,500 ಸಾವಿರ ಕೋಟಿ ರೂ. ಪ್ರತೀ ವರ್ಷ ಆದಾಯ ಬರುತ್ತಿದೆ. ಆದರೆ ರಸ್ತೆ, ಚರಂಡಿಗೆಂದು ಸರಕಾರ ಈ ಹಣವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಹಿಂದೂ ಸಂಪ್ರದಾಯ, ಹಿಂದುತ್ವವನ್ನು ಉಳಿಸುತ್ತೇವೆ ಎಂದು ಹೇಳುವ ಬಿಜೆಪಿ ಸರಕಾರವೂ ಇದನ್ನು ಸರಿಯಾಗಿ ಮಾಡಿಲ್ಲ. ಗೋಶಾಲೆ, ವೇದಪಾಠ ಶಾಲೆಗಳು ಮಾಡಬೇಕು, ಅರ್ಚಕರಿಗೆ, ಶಿಲ್ಪ ಕಲಾಕಾರರಿಗೆ ಸಕಲ ವ್ಯವಸ್ಥೆ, ದೇವಸ್ಥಾನಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ದುಡ್ಡು ವಿನಿಯೋಗಿಸಿಲ್ಲ. ಆದ್ದರಿಂದ ಮುಂದಿನ ಬಜೆಟ್ ನಲ್ಲಿ ಸಿಎಂ ಬೊಮ್ಮಾಯಿಯವರು ಈ ಎಲ್ಲಾ ಅಂಶಗಳಿಗೆ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಬೇಕೆಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.