ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರು ಬೋಟ್ ಗಳ ಮೇಲೆ ಕನ್ಯಾಕುಮಾರಿಯಲ್ಲಿ ಕಲ್ಲು ತೂರಾಟ
Tuesday, February 14, 2023
ಮಂಗಳೂರು: ನಗರದಿಂದ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿರುವ ಮಂಗಳೂರಿನ ಬೋಟ್ ಗಳ ಮೇಲೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಕಲ್ಲು ತೂರಾಟ ನಡೆಸಿರುವ ಕೃತ್ಯವೊಂದು ಬೆಳಕಿಗೆ ಬಂದಿದೆ. ಪರಿಣಾಮ ಮಂಗಳೂರಿನ ಬೋಟ್ ಗಳಲ್ಲಿದ್ದ ಏಳೆಂಟು ಮಂದಿ ಮೀನುಗಾರರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ಮಂಗಳೂರಿನ ಏಳೆಂಟು ಬೋಟ್ ಗಳು ತಮಿಳುನಾಡಿನ ಕನ್ಯಾಕುಮಾರಿ ಬಳಿ ಮೀನುಗಾರಿಕೆಯಲ್ಲಿ ನಿರತವಾಗಿತ್ತು ವೇಳೆ ಕಲ್ಲು ತೂರಾಟದ ಕೃತ್ಯ ನಡೆದಿದೆ. ಮಂಗಳೂರಿನ ಬೋಟ್ ಗಳನ್ನು ಸಮುದ್ರದ ಮಧ್ಯೆ ತಮಿಳು ಮಾತನಾಡುತ್ತಿದ್ದ ಮೀನುಗಾರರಿದ್ದ ಹತ್ತಾರು ಬೋಟ್ ಗಳು ಸುತ್ತುವರಿದಿವೆ. ಈ ವೇಳೆ ಆ ಬೋಟ್ ಗಳಲ್ಲಿ ಇದ್ದವರು ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಏಳೆಂಟು ಮೀನುಗಾರರು ಗಾಯಗೊಂಡಿದ್ದಾರೆ. ಕಲ್ಲು ತೂರಾಟದ ದೃಶ್ಯವನ್ನು ಮಂಗಳೂರಿನ ಬೋಟ್ ನಲ್ಲಿದ್ದ ಮೀನುಗಾರರು ವೀಡಿಯೋ ಮಾಡಿದ್ದಾರೆ.
ಈ ಪ್ರಕರಣ ಫೆ.8ರಂದು ನಡೆದಿದ್ದು, ಆಳ ಸಮುದ್ರ ಮೀನುಗಾರಿಕೆಯಿಂದ ಹಿಂದೆ ಬಂದಿರುವ ಮೀನುಗಾರರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಂದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ ದೂರು ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.