ಮಂಗಳೂರು: ತೆಂಕುತಿಟ್ಟು ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತ ಇನ್ನಿಲ್ಲ - ಮರೆಯಾಯಿತು 'ಬಲಿಪ' ಪರಂಪರೆಯ ದೊಡ್ಡ ಕೊಂಡಿ
Thursday, February 16, 2023
ಮಂಗಳೂರು: 'ಬಲಿಪ' ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿ ಆ ಪರಂಪರೆಗೆ ಮೆರುಗು ತಂದ ತೆಂಕುತಿಟ್ಟಿನ ಮೇರು ಭಾಗವತ ಫೆ.16ರಂದು ಸಂಜೆ 6.30ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
ಯಕ್ಷಗಾನದ ದಂತಕಥೆಯೆನಿಸಿದ್ದ ಬಲಿಪ ನಾರಾಯಣ ಭಾಗವತರು(86) ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಮ್ಮ ತಂದೆ ಮಾಧವ ಭಟ್ಟರಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿತ ಬಲಿಪ ನಾರಾಯಣ ಭಾಗವತರು ಅನಂತರ ತಮ್ಮ ಅಜ್ಜ ಬಲಿಪ ಭಾಗವತರಿಂದ ಭಾಗವತಿಕೆಯ, ಯಕ್ಷಗಾನ ನಡೆಯ ಪಟ್ಟುಗಳನ್ನು ಕರಗತ ಮಾಡಿಕೊಂಡರು. 1952ರಲ್ಲಿ ಮುಲ್ಕಿ ಮೇಳದಲ್ಲಿ ಸಂಗೀತಗಾರರಾಗಿ ಯಕ್ಷ ಪಯಣವನ್ನು ಆರಂಭಿಸಿದರು. ಬಳಿಕ ಕೂಡ್ಲು ಮೇಳದಲ್ಲಿ ಸಂಗೀತಗಾರರಾಗಿ ತಿರುಗಾಟ ಮಾಡಿದರು. 1953ರಲ್ಲಿ ಭಗವತಿ ಮೇಳದಲ್ಲಿ ಭಾಗವತರಾಗಿ ತಿರುಗಾಟ ಮಾಡಿ ಬಳಿಕ ಪೆಡ್ರೆ ಜಟಾಧಾರಿ ಮೇಳ, ಕೂಡ್ಲು, ಇರಾ, ರೆಂಜಾಳ, ಸೌಕೂರು, ಧರ್ಮಸ್ಥಳ, ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದರು. 1972ರಲ್ಲಿ ಕಟೀಲು ಮೇಳ ಸೇರಿದ ಅವರು 2003ರವರೆಗೆ ದೀರ್ಘಾವಧಿ ಕಾಲ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು.
ಆಟ-ಕೂಟ-ಗಾನ ವೈಭವ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದ ಬಲಿಪ ನಾರಾಯಣ ಭಾಗವತರು, ಕಿರಿಯ ಬಲಿಪರೆಂದೇ ಪ್ರಸಿದ್ಧರಾದವರು. ತಮ್ಮ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು ಹಾಕಿಕೊಟ್ಟ ತೆಂಕುತಿಟ್ಟು ಯಕ್ಷಗಾನದ 'ಬಲಿಪ ಶೈಲಿ'ಯನ್ನು ಸಮರ್ಥವಾಗಿ ಮುನ್ನಡೆಸಿದವರು. ಪಾರ್ತಿಸುಬ್ಬನ 'ಪಂಚವಟಿ', ಮುದ್ದಣನ 'ಕುಮಾರ ವಿಜಯ' ಪ್ರಸಂಗಗಳನ್ನು ಇವರ ಹಾಗೆ ಹಾಡುವವರು ಮತ್ತೊಬ್ಬರಿಲ್ಲ ಎಂಬ ಕೀರ್ತಿಯನ್ನು ಪಡೆದಿದ್ದರು. ಹಲವಾರು ಯಕ್ಷಗಾನ ಪ್ರಸಂಗಗಳು ಇವರಿಗೆ ಕಂಠಸ್ಥವಾಗಿತ್ತು. ರಂಗಸ್ಥಳದಲ್ಲಿ ಇವರ ಕಂಚಿನ ಕಂಠವನ್ನು ಆಲಿಸಲೆಂದೇ ಯಕ್ಷ ರಸಿಕರು ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದರು.