ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ - ರಾಜ್ಯಪಾಲ ಗೆಹ್ಲೋಟ್ ಭಾಗಿ
Thursday, February 2, 2023
ಮಂಗಳೂರು: ಶತ್ರು ಪಡೆ ಅರಬ್ಬಿಸಮುದ್ರ ಮಾರ್ಗವಾಗಿ ದೇಶದೊಳಗೆ ನುಸುಳಲು ಯತ್ನಿಸಿತು. ತಕ್ಷಣ ಕೋಸ್ಟ್ ಗಾರ್ಡ್ ಶತ್ರು ದೇಶದ ನುಸುಳುಕೋರರನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿತು. ಅಗ್ನಿ ಅವಘಡಕ್ಕೆ ತುತ್ತಾದ ಸೇನಾ ಬೋಟ್ ಅನ್ನು ತಕ್ಷಣ ನೀರು ಹಾಯಿಸಿ ನಂದಿಸಲಾಯಿತು. ಈ ವೇಳೆ ಸಮುದ್ರಕ್ಕೆ ಬಿದ್ದ ಸೇನಾನಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಯಿತು.
ಈ ದೃಶ್ಯ ಕಂಡು ಬಂದಿದ್ದು ಅರಬ್ಬಿ ಸಮುದ್ರದಲ್ಲಿ. ಇದು ನೈಜ ದೃಶ್ಯವಲ್ಲ, ಪಕ್ಕಾ ಅಣಕು ಕಾರ್ಯಾಚರಣೆ. ಇಂಡಿಯನ್ ಕೋಸ್ಟ್ ಗಾರ್ಡ್ ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ಕೋಸ್ಟ್ ಗಾರ್ಡ್ ಪಣಂಬೂರು ಸಮೀಪದ ಅರಬ್ಬೀ ಸಮುದ್ರದಲ್ಲಿ ಈ ವಿವಿಧ ಕಸರತ್ತುಗಳನ್ನು ನಡೆಸಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೋಸ್ಟ್ ಗಾರ್ಡ್ ದಿನಾಚರಣೆಯನ್ನು ಉದ್ಘಾಟಿಸಿ ಈ ಅಣಕು ಕಾರ್ಯಾಚರಣೆಯನ್ನು ವೀಕ್ಷಿಸಿ ಸಂತಸಪಟ್ಟರು.
ಜಲಸೇನೆ ಸಮುದ್ರದಲ್ಲಿ ಯಾವ ರೀತಿ ಕಾರ್ಯಾಚರಣೆ ನಡೆಸುತ್ತದೆ ಎಂಬ ವಿಚಾರ ಹೆಚ್ಚಿನವರಿಗೆ ಅರಿವಿಲ್ಲ. ಅದರಲ್ಲೂ ಕೋಸ್ಟ್ ಗಾರ್ಡ್ ನಲ್ಲಿ ಸೇವೆ ಸಲ್ಲಿಸುವ ಸೇನಾನಿಗಳ ಕುಟುಂಬಿಕರು ಈ ಬಗ್ಗೆ ಅರಿಯಬೇಕೆಂದು ಅವರನ್ನೂ ಸಮುದ್ರ ಮಧ್ಯೆ ಕರೆತರಲಾಗಿತ್ತು. ಕೋಸ್ಟ್ ಗಾರ್ಡ್ ನ ಸಿಬ್ಬಂದಿಯ ಕಾರ್ಯಾಚರಣೆ ನೋಡಿ ಸ್ವತಃ ಅವರ ಕುಟುಂಬಿಕರೇ ನಿಟ್ಟುಸಿರು ಬಿಟ್ಟಿದ್ದಾರೆ.
ನಾಲ್ಕು ಗಂಟೆಗಳ ಕಾಲನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ನೌಕೆ ವರಾಹದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಇನ್ ಸ್ಪೆಕ್ಟರ್ ಜನರಲ್ ಎಂ.ವಿ.ಬಾಡ್ಕರ್ ಕೋಸ್ಟ್ ಗಾರ್ಡ್ ಚಟುವಟಿಕೆಗಳನ್ನು ವಿವರಿಸಿದ್ದಾರೆ. ಕಡಲ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ರಾಜ್ಯಪಾಲರ ಜೊತೆ ಚರ್ಚಿಸಿದ್ದಾರೆ. ಜನವಸತಿ ಮತ್ತು ಜನವಸತಿ ಇಲ್ಲದ ದ್ವೀಪಗಳ ಕರಾವಳಿ ಭದ್ರತೆಯ ಅಗತ್ಯತೆಗಳು, ಕೋಸ್ಟ್ ಗಾರ್ಡ್ ಪಾಲು ಮತ್ತು ಸಮುದ್ರದಲ್ಲಿ ನಾವಿಕರು ಮತ್ತು ಮೀನುಗಾರರ ಸುರಕ್ಷತೆ ಮತ್ತು ಸುರಕ್ಷತೆಯ ಜವಾಬ್ದಾರಿ, ಪರಸ್ಪರ ಕಾರ್ಯಸಾಧ್ಯತೆ ಗಳ ಬಗ್ಗೆ ರಾಜ್ಯಪಾಲರು ಸಮಾಲೋಚನೆ ನಡೆಸಿದ್ದಾರೆ.
Byte: ಕೋಸ್ಟ್ ಗಾರ್ಡ್ ಕಮಾಂಡೆಂಟ್ ನ ಪತ್ನಿ, ವಸುಧಾ ಉಪಾಧ್ಯಾಯ
ಕೋಸ್ಟ್ ಗಾರ್ಡ್ ಯೋಧನ ಕುಟುಂಬಸ್ಥೆ - ಅನನ್ಯಾ ಶೆಟ್ಟಿ