ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಮತ್ತೆ ಬೆಂಕಿ - ಕಂಗಾಲಾದ ನಾಗರಿಕರು
Sunday, February 5, 2023
ಮಂಗಳೂರು: ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಬೆಂಕಿ ಒಂಬತ್ತು ದಿನಗಳಾದರೂ ತಣಿಯದ ಪರಿಣಾಮ ಹೊಗೆಯಿಂದ ಸುತ್ತಮುತ್ತಲಿನ ನಿವಾಸಿಗಳು ದಮ್ಮು, ಕೆಮ್ಮಿನಿಂದ ಬಳಲಿ ಈಗಷ್ಟೇ ಸಹಜ ಸ್ಥಿತಿಗೆ ಮರಳಿದ್ದರು. ಇದೀಗ ಮತ್ತೆ ತ್ಯಾಜ್ಯ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಹೊಗೆ ಏಳಲಾರಂಭಿಸಿದ್ದು, ನಾಗರಿಕರು ಕಂಗಾಲಾಗಿದ್ದಾರೆ.
ಪದೇ ಪದೇ ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಬೆಂಕಿ ಕಾಣಲಾರಂಭಿಸುತ್ತಿದ್ದು, ಇದೀಗ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ಜ.6ರಂದು ಡಂಪಿಂಗ್ ಯಾರ್ಡ್ ಗೆ ಬಿದ್ದ ಬೆಂಕಿಯ ಹೊಗೆಗೆ ಪಚ್ಚನಾಡಿ, ಮಂಗಳನಗರ, ಮಂದಾರ ಪ್ರದೇಶದ ನಿವಾಸಿಗಳು ಅಕ್ಷರಶಃ ನಲುಗಿದ್ದರು. ನಿನ್ನೆ ಅದರ ಎದುರು ಭಾಗದ ತ್ಯಾಜ್ಯ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿತ್ತು. ಇಂದು ಮತ್ತೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ತ್ಯಾಜ್ಯ ರಾಶಿಯನ್ನು ಆವರಿಸಿದೆ. ಪರಿಣಾಮ ಹೊಗೆ ಆಕಾಶದೆತ್ತರಕ್ಕೆ ದಟ್ಟವಾಗಿ ಎದ್ದು, ಸಂಪೂರ್ಣ ಪರಿಸರವನ್ನು ವ್ಯಾಪಿಸಿದೆ.
ಸ್ಥಳದಲ್ಲಿ 3-4 ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದ್ದು, ಸ್ಥಳದಲ್ಲಿ ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಆರೋಗ್ಯಾಧಿಕಾರಿ ಬೀಡು ಬಿಟ್ಟಿದ್ದಾರೆ. ತ್ಯಾಜ್ಯ ರಾಶಿಗೆ ಪದೇ ಪದೇ ಬೆಂಕಿ ಬೀಳುವ ಬಗ್ಗೆ ನಾಗರಿಕರು ಮಂಗಳೂರು ಮನಪಾ, ಸ್ಥಳೀಯ ಶಾಸಕರು, ಕಾರ್ಪೊರೇಟರ್ ವಿರುದ್ಧ ಕಿಡಿಕಾರಿದ್ದರು. ಆದರೆ ಇದೀಗ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ನಾಗರಿಕರು ಜಿಲ್ಲಾಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
Byte: ಮಂಗಳೂರು ಮನಪಾ ಆಯುಕ್ತ - ಅಕ್ಷಯ್ ಶ್ರೀಧರ್