ಮಂಗಳೂರು: ಅಮಿತ್ ಶಾ ರೋಡ್ ಶೋ ಬದಲು ಜನರ ಸಮಸ್ಯೆ ಬಗೆಹರಿಸಲಿ
Thursday, February 9, 2023
ಮಂಗಳೂರು: ದೇಶದ ಗೃಹ ಸಚಿವ ಅಮಿತ್ ಷಾ ಅವರು ದ.ಕ.ಜಿಲ್ಲೆಗೆ ಆಗಮಿಸಿ ಮಂಗಳೂರಿನಲ್ಲಿ ರೋಡ್ ಶೋ ಮಾಡುವ ಬದಲು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಲಿ ಎಂದು ಐವನ್ ಡಿಸೋಜ ಕಿಡಿಕಾರಿದರು.
ಪ್ರಜಾಧ್ವನಿ ಯಾತ್ರೆಗೆ ಜನತೆಯ ಬೆಂಬಲ ಕಂಡು ಬಿಜೆಪಿಗರು ದಿಗ್ಬ್ರಮೆಗೊಂಡಿದ್ದಾರೆ. ಆದ್ದರಿಂದ ರಾಜ್ಯಕ್ಕೆ ಪದೇ ಪದೇ ಪ್ರಧಾನಿ ಮೋದಿಯವರು ಹಾಗೂ ಸಚಿವರನ್ನು ಕರೆಸಿಕೊಳ್ಳುತ್ತಿದ್ದಾರೆ. ಅಮಿತ್ ಷಾ ಫೆ.11ರಂದು ದ.ಕ.ಜಿಲ್ಲಾ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಆದರೆ ಅದಕ್ಕಿಂತ ಮೊದಲು ಬಿಜೆಪಿ ನಾಯಕರು ನಮ್ಮ ಜಿಲ್ಲೆಯ ರಸ್ತೆಯ ಸ್ಥಿತಿಗತಿಗಳನ್ನು ಅವರಿಗೆ ತೋರಿಸಲಿ. ರಾಷ್ಟ್ರದ ಗೃಹಸಚಿವರು ಜಿಲ್ಲೆಗೆ ಬರುವಾಗ ಅಲ್ಲಿನ ಅಭಿವೃದ್ಧಿಯ ಬಗ್ಗೆ ಏನು ಹೇಳುತ್ತಾರೆ ಎಂಬುದು ಮುಖ್ಯವೇ ಹೊರತು ರೋಡ್ ಶೋ ಅಲ್ಲ ಎಂದು ವ್ಯಂಗ್ಯವಾಡಿದರು.
ನಿರುದ್ಯೋಗ ಸಮಸ್ಯೆ ಬಗೆಹರಿಸಲು, ಮೀನುಗಾರರಿಗೆ ಯೋಜನೆ, ಬೆಲೆಯೇರಿಕೆಯನ್ನು ತಗ್ಗಿಸಲು ಏನಾದರೂ ಯೋಜನೆ ಪ್ರಕಟ ಮಾಡುತ್ತಾರಾದರೆ ಅದನ್ನು ಮೊದಲು ತಿಳಿಸಲಿ. ಇಂದು ರೆಪೋ ದರ 0.25% ಹೆಚ್ಚಳ ಮಾಡಲಾಗಿದೆ. ಗೃಹ ಸಾಲ, ವಾಹನ ಸಾಲಗಳ ಹೆಚ್ಚಳದ ಮೂಲಕ ಬಿಜೆಪಿ ಸರಕಾರ 9% ಬಡ್ಡಿಗಿಂತ ಸಾಲವೇ ಇಲ್ಲವೆಂಬಂತೆ ಆಗಿದೆ. ಕರಾವಳಿಯಲ್ಲಿ ಬಿಜೆಪಿ ವಿರುದ್ಧ ಧ್ವನಿ ಬಂದಿದೆ ಎಂದರು.
2013ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದ ಸಂದರ್ಭ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ 40 ಸೀಟ್ ಬಂದಿತ್ತು. ಇಂದು ಮತ್ತೆ ಯಡಿಯೂರಪ್ಪ V/S ಬಿಜೆಪಿ ನಡೆಯುತ್ತಿದೆ. ಅದು ಬಿಟ್ಟು ಬಿಜೆಪಿಯವರು ಕಾಂಗ್ರೆಸ್ ನಾಯಕತ್ವದ ಟೀಕೆ ಮಾಡುತ್ತಿದ್ದಾರೆ. ಮೊದಲು ಅವರು ತಮ್ಮ ಮನೆ ಹೇಗಿದೆ ಎಂದು ನೋಡಲಿ. ಯಡಿಯೂರಪ್ಪ, ಅಮಿತ್ ಷಾ, ಧರ್ಮೇಂದ್ರ, ಕ್ಯಾಬಿನೆಟ್ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾವ ಬಿಜೆಪಿಯಿಂದಲೂ ಸಾಧ್ಯವಿಲ್ಲ ಎಂದು ಐವನ್ ಡಿಸೋಜ ಹೇಳಿದರು.