ಮಂಗಳೂರು: ಬೀದಿಬದಿ ವ್ಯಾಪಾರಸ್ಥರ ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ಮುಖಂಡರಿಂದ ಮನವಿ
Thursday, March 16, 2023
ಮಂಗಳೂರು: ಬೀದಿಬದಿ ವ್ಯಾಪಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಬೀದಿಬದಿ ವ್ಯಾಪಾರಿಗಳು ಇಂದು ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುವ ಸಿಎಂ ಬೊಮ್ಮಾಯಿಯರಿಗೆ ಮನವಿ ಸಲ್ಲಿಸಲು ಅವಕಾಶ ಕೋರಿದ್ದರು. ಆದರೆ ಪೊಲೀಸರು ಮೇರಿಹಿಲ್ ಹೆಲಿಪ್ಯಾಡ್ ಬಳಿ ಸಿಎಂ ಭೇಟಿಗೆ ಅವಕಾಶ ನೀಡಿರಲಿಲ್ಲ. ಆದರೆ ಸಿಎಂ ಭೇಟಿಗೆ ಬೀದಿ ವ್ಯಾಪಾರಿಗಳು ಪಟ್ಟು ಹಿಡಿದಿದ್ದಾರೆ. ಈ ವೇಳೆ ಪ್ರತಿಭಟನೆಯ ಎಚ್ಚರಿಕೆಗೆ ಮಣಿದ ಪೊಲೀಸರು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ 10 ಮಂದಿ ಮುಖಂಡರಿಗೆ ಸಿಎಂ ಭೇಟಿಗೆ ಅವಕಾಶ ನೀಡಿದ್ದಾರೆ.
ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಫಲಾನುಭವಿಗಳ ಸಭೆಯಲ್ಲಿ ಅವರಿಗೆ ಮನವಿ ನೀಡಲು ಅವಕಾಶ ನೀಡಲಾಗಿತ್ತು. ಆದ್ದರಿಂದ ಬಿ.ಎಂ.ಇಮ್ತಿಯಾಝ್, ಸುನಿಲ್ ಕುಮಾರ್ ಬಜಾಲ್ ಸೇರಿದಂತೆ 10ಮಂದಿ ಮುಖಂಡರು ಫಲಾನುಭವಿಗಳ ಸಭೆಯ ಬಳಿಕ ವೇದಿಕೆಯಿಂದ ಇಳಿದು ಬಂದ ಸಿಎಂ ಬೊಮ್ಮಾಯಿಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.