ಮಂಗಳೂರು: ಟಿಕೆಟ್ ಹಂಚಿಕೆಯಲ್ಲಿ ಸುಳ್ಯ ಕಾಂಗ್ರೆಸ್ ಬಂಡಾಯ - ನಂದ ಕುಮಾರ್ ಪರವಾಗಿ ಕೈ ಕಾರ್ಯಕರ್ತರ ಮಂಗಳೂರು ಚಲೋ
Wednesday, March 29, 2023
ಮಂಗಳೂರು: ಟಿಕೆಟ್ ಹಂಚಿಕೆಯಲ್ಲಿ ಸುಳ್ಯ ಕಾಂಗ್ರೆಸ್ ನಲ್ಲಿ ಭಾರೀ ಬಂಡಾಯ ತಲೆದೋರಿದ್ದು, ಸುಳ್ಯದ ನೂರಾರು ಕೈ ಕಾರ್ಯಕರ್ತರು ಮಂಗಳೂರಿನ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ 'ಮಂಗಳೂರು ಚಲೋ' ನಡೆಸಿದ್ದಾರೆ.
ಕಾಂಗ್ರೆಸ್ ನಿಂದ ಈಗಾಗಲೇ ಹೈಕಮಾಂಡ್ ನ ತೀರ್ಮಾನದಂತೆ ಜಿಗಣಿ ಕೃಷ್ಣಪ್ಪಗೆ ಸುಳ್ಯದಲ್ಲಿ ಟಿಕೆಟ್ ನೀಡಲಾಗಿದೆ. ಆದರೆ ಅವರಿಗೆ ಸೀಟು ನೀಡಿರೋದಕ್ಕೆ ವಿರೋಧ ವ್ಯಕ್ತಪಡಿಸಿರುವ ಸುಳ್ಯ ಬ್ಲಾಕ್ ಹಾಗೂ ಕಡಬ ಬ್ಲಾಕ್ ಕೈ ಕಾರ್ಯಕರ್ತರು ಟಿಕೆಟ್ ಅಕಾಂಕ್ಷಿ ನಂದಕುಮಾರ್ ಗೆ ಟಿಕೆಟ್ ನೀಡುವಂತೆ ಇಂದು ಮಂಗಳೂರು ಚಲೋ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಡಬ, ಸುಳ್ಯದಿಂದ ಬಸ್, ಟೆಂಪೊ ಟ್ರ್ಯಾವೆಲರ್ ಗಳಲ್ಲಿ 300ಕ್ಕೂ ಅಧಿಕ ಮಂದಿ ಕೈ ಕಾರ್ಯಕರ್ತರು ಆಗಮಿಸಿದ್ದರು.
ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಗೆಲ್ಲುವ ಅಭ್ಯರ್ಥಿ ನಂದ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ನಂದ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದಲ್ಲಿ ಈ ಬಾರಿ ಸುಳ್ಯದಲ್ಲಿ ಗೆಲ್ಲಿಸಿ ತೋರಿಸುತ್ತೇವೆ ಎಂದು ಒಕ್ಕೊರಲಿನಿಂದ ಹೇಳಿದರು. ಈ ವೇಳೆ ತಮ್ಮ ಮನವಿ ಸ್ವೀಕರಿಸಲು ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಬರಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದರು. ಆದರೆ ಮನವಿ ಸ್ವೀಕರಿಸಲು ಆಗಮಿಸಿದ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಅವರು ತುರ್ತು ಸಭೆಯ ನಿಮಿತ್ತ ಅವರು ಬೆಂಗಳೂರಿಗೆ ಹೋಗಿದ್ದಾರೆ ಎಂದು ಹೇಳಿದರು. ಈ ವೇಳೆ ಅವರು ಬರಲೇ ಬೇಕೆಂಬ ಆಗ್ರಹ ಕೇಳಿ ಬಂದಿತು.
ಆದ್ದರಿಂದ ಸದಾಶಿವ ಉಳ್ಳಾಲ್ ಅವರು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾತನಾಡಿದರು. ಅವರಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಮೂರು ಗಂಟೆಯಲ್ಲಿ ಅವರು ಬರಬೇಕೆಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾರ್ಯಕರ್ತರೆಲ್ಲಾ ಸೇರಿ ಕಾಂಗ್ರೆಸ್ ಕಚೇರಿಯಲ್ಲಿ ಸಭೆಯನ್ನು ನಡೆಸುವ ತಯಾರಿ ನಡೆಸಿದ್ದಾರೆ. ಪರಿಸ್ಥಿತಿ ಈಗ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂದಿನ ಬೆಳವಣಿಗೆ ಏನು ಎಂಬುದನ್ನು ಕಾದು ನೋಡಬೇಕಿದೆ.