ಮಂಗಳೂರು: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಸಿಕ್ಕಿದ್ದಲ್ಲಿ ದೇಶವ್ಯಾಪಿ ಸಾಧು - ಸಂತರಿಂದ ಪ್ರತಿಭಟನೆ ಎಚ್ಚರಿಕೆ
Friday, April 28, 2023
ಮಂಗಳೂರು: ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ಹೊರಟಿರುವುದು ನಾಗರಿಕ ಸಮಾಜಕ್ಕೆ ನೋವಾಗಿದೆ. ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೆ ಭಾರತೀಯ ನಾಗರಿಕತೆ, ಪ್ರಾಚೀನ ಭಾರತದ ಭವ್ಯ ಪರಂಪರೆ ಸಂಸ್ಕೃತಿಯ ನಾಶಕ್ಕೆ ಹೊರಟ ಸ್ವರೂಪವನ್ನು ತರುವುದು ಸುತರಾಂ ಸರಿಯಲ್ಲ. ಆದ್ದರಿಂದ ಇದು ಜಾರಿಗೆ ಬಂದಲ್ಲಿ ದೇಶವ್ಯಾಪಿ ಸಾಧು - ಸಂತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ಸತ್ ಸಂತಾನಕ್ಕಾಗಿ ವಿವಾಹ ಪದ್ಧತಿ ಜಾರಿಯಲ್ಲಿದೆ. ಆದರೆ ಪ್ರಾಣಿಗಳಲ್ಲಿ ಇರುವಂತಹ ಬುದ್ಧಿ ನಾಗರಿಕ ಮನುಷ್ಯನಲ್ಲಿ ಇತ್ತೀಚೆಗೆ ಇಲ್ಲವಾಗಿ ಹೋಗಿದೆ ಎಂದು ಹೇಳಿದರು.
ಸಲಿಂಗ ಕಾಮ ಹಾಗೂ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕಬಾರದು. ಸುಪ್ರೀಂ ಕೋರ್ಟ್ ಕೂಡಾ ಇದಕ್ಕೆ ಕಾನೂನಿನ ಮಾನ್ಯತೆ ನೀಡಬಾರದು. ಈ ವಿಚಾರವನ್ನು ಹಿನ್ನೆಲೆಯಾಗಿಟ್ಟುಕೊಂಡು ದೇಶದ ಪ್ರಬುದ್ಧ ನಾಗರಿಕರು, ಕಾನೂನು ಪಂಡಿತರು, ಧರ್ಮಜ್ಞಾನಿಗಳು, ವಿಜ್ಞಾನಿಗಳು ಇದರ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಬೇಕು. ಅದರ ಸಾಧಕ - ಬಾಧಕಗಳನ್ನು ಕೂಲಂಕಷವಾಗಿ ಪರಾಮರ್ಶಿಸಬೇಕು. ತರಾತುರಿಯಲ್ಲಿ ಕೈಗೆತ್ತಿಕೊಳ್ಳುವ ವಿಚಾರವಲ್ಲವಿದು. ಇಂತಹ ವಿಚಾರಕ್ಕೆ ಸಾಂವಿಧಾನಿಕ ಮಾನ್ಯತೆ ಬಂದಲ್ಲಿ ಹಾದಿಬೀದಿಯಲ್ಲಿ ತೊಡಗುವ ಸಾಧ್ಯತೆಗಳಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಎಚ್ಚರಿಕೆಯಿಂದ ಈ ಬಗ್ಗೆ ತೀರ್ಪು ನೀಡಬೇಕು ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.