Mangalore:ಮಂಗಳೂರಿನಲ್ಲಿ ನಿಷೇಧಿತ ತ್ರಿಪಲ್ ತಲಾಖ್ ಪ್ರಕರಣ ಪತ್ತೆ, ಮದುವೆಯಾದ ಆರೇ ತಿಂಗಳಲ್ಲಿ ಹಲ್ಲೆ ನಡೆಸಿ ಪತ್ನಿಗೆ ತಲಾಖ್ ನೀಡಿದ ನಿರ್ದಯಿ
Tuesday, May 30, 2023
ಮಂಗಳೂರು: ಮೋದಿ ಸರಕಾರ ದೇಶದಲ್ಲಿ ತ್ರಿಬಲ್ ತಲಾಖ್ ನಿಷೇಧಿಸಿದ್ದರೂ, ತಲಾಖ್ ನೀಡುತ್ತಿರುವುದು ಮಾತ್ರ ಇನ್ನೂ ಜೀವಂತವಿದೆ. ಅದಕ್ಕೆ ನಿದರ್ಶನವೆಂಬಂತೆ ಮಂಗಳೂರಿನಲ್ಲಿ ಮದುವೆಯಾದ ಆರೇ ತಿಂಗಳಲ್ಲಿ ನಿರ್ದಯಿ ಪತಿಯೋರ್ವನು ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್ ಹೇಳಿ ದಾಂಪತ್ಯವನ್ನೇ ಮುರಿದ ಘಟನೆ ನಡೆದಿದೆ.
ಹೌದು... ನಗರದ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಪತ್ನಿಯನ್ನು ಹಿಂಸಿಸಿ ತಲಾಖ್ ನೀಡಿ ಪಾಪಿ ಪತಿ. ಈತ ತರಕಾರಿ ವ್ಯಾಪಾರಿ. ಸಂತ್ರಸ್ತೆ ಶಬಾನಾಗೆ ಮೊದಲೊಂದು ಮದುವೆಯಾಗಿ ಎರಡು ಮಕ್ಕಳಿತ್ತು. ಮೊದಲ ಪತಿಯಿಂದ ಬೇರೆಯಾಗಿದ್ದ ಈಕೆ ಆರು ತಿಂಗಳ ಹಿಂದಷ್ಟೇ ಹುಸೇನ್ ಅನ್ನು ವಿವಾಹವಾಗಿದ್ದಳು. ಎರಡು ತಿಂಗಳು ಚೆನ್ನಾಗಿಯೇ ಸಂಸಾರ ನಡೆದಿತ್ತು. ಆ ಬಳಿಕ ಆತನ ಅಸಲಿ ಮುಖ ಪತ್ನಿಗೆ ಪ್ರದರ್ಶನವಾಗತೊಡಗಿತು. ಮದುವೆಯಾದ ಕೇವಲ ಎಂಟೇ ದಿನಗಳಲ್ಲಿ ನಯವಾಗಿ ಮಾತನಾಡಿ ಸಾಲದಲ್ಲಿದ್ದೇನೆಂದು ಹುಸೇನ್ ಪತ್ನಿಯ ಚಿನ್ನಾಭರಣ ಸೇರಿ 10 ಲಕ್ಷ ರೂ.ವನ್ನು ಪೀಕಿಸಿದ್ದ.
ಕೇವಲ ಹಣ ಒಡವೆಗಾಗಿ ಮದುವೆಯಾಗಿದ್ದ ಹುಸೇನ್ ಪತ್ನಿಯನ್ನು ತವರು ಮನೆಯಲ್ಲೇ ಇರಿಸಿದ್ದನು. ಅಲ್ಲದೆ ಗರ್ಭಿಣಿಯಾಗಿದ್ದ ಆಕೆಯನ್ನು ಬಲವಂತವಾಗಿ ಮಾತ್ರೆ ತಿನ್ನಿಸಿ ಅಬಾರ್ಶನ್ ಮಾಡಿಸಿದ್ದನು. ಪತಿ ಮನೆಗೆ ಬಂದಿದ್ದ ವೇಳೆ ಮನಬಂದಂತೆ ಥಳಿಸಿದ ಹುಸೇನ್ ಜುಟ್ಟು ಹಿಡಿದು ಮೂರು ಬಾರಿ ತಲಾಖ್ ಹೇಳಿ ದಾಂಪತ್ಯ ಸಂಬಂಧಕ್ಕೆ ತಿಲಾಂಜಲಿ ಬಿಟ್ಟಿದ್ದ. ಹಲ್ಲೆಯಿಂದ ಗಾಯಗೊಂಡಿದ್ದ ಶಬಾನಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೊದಲ ಪತ್ನಿಗೂ ತಲಾಖ್ ಹೇಳಿ ಸಂಬಂಧ ಕಡಿದುಕೊಂಡಿದ್ದ ಹುಸೇನ್ ಇದೀಗ ಎರಡನೇ ಪತ್ನಿಗೂ ತಲಾಖ್ ಹೇಳಿದ್ದಾನೆ. ಪರಿಣಾಮ ಶಬಾನಾ ನ್ಯಾಯಕ್ಕಾಗಿ ಪಾಂಡೇಶ್ವರ ಠಾಣೆಯ ಮೆಟ್ಟಿಲೇರಿದ್ದಾಳೆ. ಅಲ್ಲದೆ ತನಗಾದ ಅನ್ಯಾಯ ಮತ್ತೊಬ್ಬ ಹೆಣ್ಣಿಗೆ ಆಗಬಾರದೆಂದು ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾಳೆ. ಒಟ್ಟಿನಲ್ಲಿ ಪಾಪಿ ಮಹಮ್ಮದ್ ಹುಸೇನ್ ನಂತಹ ಅಮಾನವೀಯ ಪತಿಗೆ ಕಾನೂನುರೀತ್ಯಾ ಶಿಕ್ಷೆ ಆಗಲಿದೆಯೇ ಎಂಬುದು ಕಾದು ನೋಡಬೇಕಿದೆ.