ಮಂಗಳೂರು: ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕಲು ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾಚರಣೆ - ಡಾ.ಜಿ.ಪರಮೇಶ್ವರ್
Tuesday, June 6, 2023
ಮಂಗಳೂರು: ನಗರದಲ್ಲಿ ನಡೆಯುವ ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕಲು ಆ್ಯಂಟಿ ಕಮ್ಯುನಲ್ ವಿಂಗ್ ಅನ್ನು ಕಾರ್ಯಾಚರಿಸಲಾಗುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಪಶ್ಚಿಮ ವಲಯ ಐಜಿ ಕಚೇರಿ ಹಾಗೂ ಮಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಶಾಂತಿ, ಕೋಮು ಸಾಮರಸ್ಯಯವಿಲ್ಲ. ಕರಾವಳಿಯಲ್ಲಿ ಭಯದ ವಾತಾವರಣವಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಈ ಪರಿಸ್ಥಿತಿ ನಿಭಾಯಿಸಲು, ಕೋಮುಸೌಹಾರ್ದತೆಯನ್ನು ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ. ಎಲ್ಲವೂ ಇದ್ದು ನಾವು ತಡೆಯದಿದ್ದರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅದಕ್ಕಾಗಿ ನೈತಿಕ ಪೊಲೀಸ್ ಗಿರಿಯನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತಿದ್ದೇವೆ. ಈ ವಿಂಗ್ ನಲ್ಲಿ ಸಮರ್ಥವಾದ ಪೊಲೀಸ್ ಅಧಿಕಾರಿಗಳು ಇರಲಿದ್ದಾರೆ ಎಂದರು.
ಕೋಮುಭಾವನೆಗಳನ್ನು ಪ್ರಚೋದಿಸುವವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಕೇಸ್ ಆದ ಬಳಿಕ ರಿವ್ಯೂ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೇಸ್ ಗಳನ್ನು ಫಾಲೋ ಅಪ್ ಮಾಡಲು, ಆ ಕೇಸ್ ಗಳ ಜವಾಬ್ದಾರಿಯನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೇನೆ. ಇಲ್ಲದಿದ್ದಲ್ಲಿ ಆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಜಿ ಪರಮೇಶ್ವರ್ ಹೇಳಿದರು.
ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ದೀಪಕ್ ರಾವ್, ಫಾಝಿಲ್, ಜಲೀಲ್, ಮಸೂದ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಬೇಕಾದ ವರದಿ ನೀಡಲು ಸೂಚಿಸಿದ್ದೇನೆ. ಆದಷ್ಟು ಶೀಘ್ರದಲ್ಲಿ ಸರ್ಕಾರ ಈ ಕುಟುಂಬಗಳಿಗೆ ಪರಿಹಾರ ನೀಡಲಿದೆ. ಡ್ರಗ್ಸ್ ಮಾಫಿಯಾ ತಡೆಯಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಆಗಸ್ಟ್ 15 ರೊಳಗೆ ಮಾಫಿಯಾ ವಿರುದ್ಧ ಡ್ರೈವ್ ಮಾಡಿ ಮಾಫಿಯಾ ವಿರುದ್ಧ, ಅಶಾಂತಿ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳು, ಯುವಕರು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಜಿ.ಪರಮೇಶ್ವರ್ ಹೇಳಿದರು.
ಬೈಟ್ - ಗೃಹಸಚಿವ - ಡಾ.ಜಿ.ಪರಮೇಶ್ವರ್