ಮಂಗಳೂರು: ಕಳೆದುಹೋದ 93 ಮೊಬೈಲ್ ಗಳನ್ನು ವಾರಸುದಾರರಿಗೆ ಹಸ್ತಾಂತರ - ನಿಮ್ಮ ಫೋನ್ ಕಳೆದುಹೋಗಿದೆಯೇ ಪತ್ತೆಗೆ ಈ ರೀತಿ ಮಾಡಿ
Saturday, June 3, 2023
ಮಂಗಳೂರು: ಮೊಬೈಲ್ ಫೋನ್ ಮಿಸ್ಸಿಂಗ್ ಆಗಿ, ಕಳವಾಗಿ ಕೆಲವರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ಇದೀಗ ಪೊಲೀಸರು ಸಿಐಇಆರ್ ಪೋರ್ಟಲ್ ಸಹಕಾರದಿಂದ ಕಳೆದುಹೋದ ಮೊಬೈಲ್ ಅನ್ನು ಸುಲಭವಾಗಿ ಪತ್ತೆಹಚ್ಚುತ್ತಾರೆ. ಇದೇ ತಂತ್ರಜ್ಞಾನದ ಸಹಕಾರದಿಂದ ಪತ್ತೆಮಾಡಿರುವ 93 ಫೋನ್ ಗಳನ್ನು ಮಂಗಳೂರು ಪೊಲೀಸ್ ಕಮಿಷನರ್ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಹೌದು... ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಆಗಿರುವ 93 ಮೊಬೈಲ್ ಫೋನ್ ಗಳನ್ನು ಸಿಐಇಆರ್ ಪೋರ್ಟಲ್ ತಂತ್ರಜ್ಞಾನದ ಸಹಕಾರದಿಂದ ಪತ್ತೆಹಚ್ಚಲಾಗಿದೆ. ಈ ಫೋನ್ ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ವಾರಸುದಾರರಿಗೆ ಹಸ್ತಾಂತರಿಸಿದರು.
ಇಲ್ಲಿಯವರೆಗೆ ಮಂಗಳೂರು ನಗರದಲ್ಲಿ ಕಳೆದುಹೋದ, ಸುಲಿಗೆಯಾದ 2,133 ಮೊಬೈಲ್ ಫೋನ್ ಗಳ ಪತ್ತೆಗೆ ಸಿಐಇಆರ್ ಪೋರ್ಟಲ್ ನಲ್ಲಿ ಐಎಂಇಐ ಬ್ಲಾಕ್ ಗೆ ಕೋರಿಕೆ ಸಲ್ಲಿಕೆಯಾಗಿತ್ತು. ಇವುಗಳಲ್ಲಿ 524 ಫೋನ್ ಗಳು ಪತ್ತೆಯಾಗುವ ಮಾಹಿತಿಯಿದೆ. ಸದ್ಯ 240 ಮೊಬೈಲ್ ಫೋನ್ ಗಳು ಪತ್ತೆಯಾಗಿದ್ದು, ಈಗಾಗಲೇ 147 ಫೋನ್ ಗಳನ್ನು ವಾರಸುದಾರರ ಸುಪರ್ದಿಗೊಪ್ಪಿಸಲಾಗಿದೆ. ಇಂದು 93 ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ನೀಡಲಾಯಿತು.
ಕಳೆದುಹೋದ ಮೊಬೈಲ್ ಫೋನ್ ಗಳು ದುರುಪಯೋಗವಾಗದಂತೆ ಅನ್ ಬ್ಲಾಕ್ ಮಾಡಲು CEIR ಪೋರ್ಟಲ್ ಅನ್ನು ಕೇಂದ್ರಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಮೊಬೈಲ್ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್ ಪಿ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದು. ಬಳಿಕ (www.celr.gov.in) ಪೋರ್ಟಲ್ ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೆ ಬ್ಲಾಕ್ ರಿಕ್ವೆಸ್ಟ್ ಗೆ ನೇರವಾಗಿ ಸಲ್ಲಿಸಬಹುದು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್ ಗೆ ದೂರು ನೀಡಬಹುದು. ಈ ಮೂಲಕ ಪೊಲೀಸರು ಇದರ ಜಾಡುಹಿಡಿದು ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಿದ್ದಾರೆ.