ಮಂಗಳೂರು: ಚುನಾವಣಾ ಕರ್ತವ್ಯ ಲೋಪ ದ.ಕ ಡಿಡಿಪಿಯು ಅಮಾನತು
Thursday, June 1, 2023
ಮಂಗಳೂರು: ವಿಧಾನಸಭಾ ಚುನಾವಣಾ ಸಂದರ್ಭ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ.ರನ್ನು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅಮಾನತು ಮಾಡಿ ಆದೇಶಿಸಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ಜಯಣ್ಣ ಅವರು ನಿರಾಕರಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಹೊರಡಿಸಿರುವ ನೋಟೀಸ್ ಗೆ ಮೇ 22 ರಂದು ಲಿಖಿತ ಉತ್ತರ ನೀಡಿದ್ದರು. ಆದರೆ ಅವರು ನೀಡಿರುವ ಉತ್ತರ ಸಮಾಧಾನ ತರಲಿಲ್ಲವೆಂಬ ನೆಲೆಯಲ್ಲಿ ಡಿಡಿಪಿಯುರನ್ನು ಅಮಾನತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೊಕ್ಕಡ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿ ಅವರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಪ್ರಭಾರವಾಗಿ ನೇಮಕ ಮಾಡಲಾಗಿದೆ.
ಜಿಲ್ಲಾಧಿಕಾರಿಯವರು ಮೇ 9 ರಂದು ಚುನಾವಣೆಯ ಪೂರ್ವ ಸಿದ್ಧತೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಹಾಜರಿರುವಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಜಯಣ್ಣರಿಗೆ ಫೋನ್ ಮಾಡಿ ತಿಳಿಸಿದ್ದರು. ಪೋನ್ ಸ್ವೀಕರಿಸಿರುವ ಜಯಣ್ಣ ತಾನು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ದಾಖಲೆಗಳನ್ನು ಸಲ್ಲಿಸಲು ಬೆಂಗಳೂರಿಗೆ ತೆರಳುತ್ತಿರುವುದಾಗಿ, ಆದ ಕಾರಣ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ವೇಳೆ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿ ಪಡೆಯದೆ ಜಿಲ್ಲಾ ಕೇಂದ್ರವನ್ನು ತೊರೆಯುವ ಮೂಲಕ ಜಯಣ್ಣ ಅವರು ಚುನಾವಣಾ ಕರ್ತವ್ಯ ಲೋಪ ಎಸಗಿದ್ದಾರೆಂದು ಜಿಲ್ಲಾಧಿಕಾರಿ ನೋಟೀಸ್ ನೀಡಿದ್ದರು.
ಅಲ್ಲದೆ ಪದವಿ ಪೂರ್ವ ಕಾಲೇಜುಗಳಲ್ಲಿ ಮತಗಟ್ಟೆಗಳನ್ನು ಮೇ 9 ಮತ್ತು 10ರಂದು ತೆರೆದಿಡಬೇಕಾಗಿದ್ದು, ಈ ಬಗ್ಗೆ ಕಾಲೇಜುಗಳಿಗೆ ಮಾಹಿತಿಯನ್ನು ನೀಡಬೇಕಾಗಿತ್ತು. ಆದರೆ, ಡಿಡಿಪಿಯು ಜಯಣ್ಣ ಸಮರ್ಪಕ ಮಾಹಿತಿ ನೀಡದ ಕಾರಣದಿಂದ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳುವಾಗ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾ ಆಧಿಕಾರಿಗೆ ಮಾಹಿತಿ ನೀಡದೆ ಕೇಂದ್ರ ಸ್ಥಾನ ತೊರೆದಿರುವುದು ಜಯಣ್ಣ ಅವರ ಕರ್ತವ್ಯ ಲೋಪವಾಗಿದೆ ಎಂದು ಜಿಲ್ಲಾಧಿಕಾರಿಗಳ ನೋಟೀಸ್‌ನಲ್ಲಿ ಹೇಳಲಾಗಿದೆ.