ಮಂಗಳೂರು: ಶಬರಿಮಲೆ ಅಯ್ಯಪ್ಪ ಸಾನಿಧ್ಯದಲ್ಲಿ ಪ್ರಥಮ ಬಾರಿಗೆ ಯಕ್ಷಗಾನದ ಝೇಂಕಾರ - ಮಲಯಾಳಿಗಳ ನಾಡಿನಲ್ಲಿ ಅನುರಣಿಸಿದ ತುಳುಭಾಷೆ

ಮಂಗಳೂರು: ಶಬರಿಮಲೆ ಅಯ್ಯಪ್ಪ ಸಾನಿಧ್ಯದಲ್ಲಿ ಪ್ರಥಮ ಬಾರಿಗೆ ಯಕ್ಷಗಾನದ ಝೇಂಕಾರ - ಮಲಯಾಳಿಗಳ ನಾಡಿನಲ್ಲಿ ಅನುರಣಿಸಿದ ತುಳುಭಾಷೆ


ಮಂಗಳೂರು: ತುಳುಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಬೇಕೆಂದು ಮೊನ್ನೆ ತಾನೇ ಕರಾವಳಿಯ ಶಾಸಕರು ಸದನದಲ್ಲಿಯೇ ತುಳುವಿನಲ್ಲಿ ಮಾತನಾಡಿ ಎಲ್ಲರ ಗಮನಸೆಳೆದಿದ್ದರು. ಇದೀಗ ಮಲಯಾಳಿಗಳ ನಾಡಿನಲ್ಲಿ ತೆಂಕುತಿಟ್ಟಿನ ತುಳು ಯಕ್ಷಗಾನದ ಝೇಂಕಾರ ಕೇಳಿ ಬಂದಿದೆ.
ಹೌದು.. ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ ಯಕ್ಷಗಾನದ ಝೇಂಕಾರ ಕೇಳಿ ಬಂದಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಮೇಳದ ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ಸಂಯೋಜನೆಯಲ್ಲಿ 'ಕ್ಷೇತ್ರಪಾಲ ಉದ್ಧರಣ' ಎಂಬ ತುಳು ಆಖ್ಯಾನ ಸೊಗಸಾಗಿ ಮೂಡಿಬಂತು. ಹಿಮ್ಮೇಳದಲ್ಲಿ ಭಾಗವತರಾಗಿ ಧೀರಜ್ ರೈ ಸಂಪಾಜೆ, ಮದ್ದಳೆಯಲ್ಲಿ ರೋಹಿತ್ ಉಚ್ಚಿಲ, ಚೆಂಡೆಯಲ್ಲಿ ಜಿತೇಶ್ ಕೋಳ್ಯೂರು ಇದ್ದರೆ. ಮುಮ್ಮೇಳದಲ್ಲಿ ಕ್ಷೇತ್ರಪಾಲನಾಗಿ ದಿನೇಶ್ ಕೋಡಪದವು, ದುರ್ಗೆಯಾಗಿ ಕಾರ್ತಿಕ್ ಗಂಜಿಮಠ ಪಾತ್ರ ನಿರ್ವಹಿಸಿದ್ದರು.
ಬುಧವಾರ ಸಂಜೆ 5.30ಗೆ ಮುಕ್ಕಾಲು ಗಂಟೆಗಳ ಕಾಲ ಇಲ್ಲಿ ಯಕ್ಷಗಾನ ಪ್ರದರ್ಶನ ನಡೆದಿದೆ. ದೇವಾಲಯದ ಆವರಣದಲ್ಲಿ ಕಲಾ ಪ್ರದರ್ಶನ ಆಗಬೇಕಿದ್ದಲ್ಲಿ ಕೋರ್ಟ್ ಅನುಮತಿ ಬೇಕು. ಆದ್ದರಿಂದ 18 ಮೆಟ್ಟಿಲಿನ ಕೆಳಗಿರುವ ಕಲಾಮಂಟಪದಲ್ಲಿ ಯಕ್ಷಗಾನ ಪ್ರದರ್ಶನ ನಡೆಸಲು ಅವಕಾಶ ದೊರಕಿತ್ತು. ವಿಶೇಷವೆಂದರೆ ಮುಮ್ಮೇಳ ಕಲಾವಿದರು ಅಯ್ಯಪ್ಪ ವೃತಾನುಷ್ಠಾನದ ಕಪ್ಪುವಸ್ತ್ರದಲ್ಲಿಯೇ ಕೆಳಗಡೆ ಕುಳಿತೇ ಯಕ್ಷಗಾನ ಸೇವೆ ಮಾಡಿದ್ದಾರೆ. ಅಲ್ಲದೆ ಯಕ್ಷಗಾನ ಮುಗಿದ ಬಳಿಕ ವೇಷಧಾರಿಗಳಿಗೆ ಯಕ್ಷಗಾನದ ವೇಷದಲ್ಲಿಯೇ ದೇವಸ್ಥಾನದೊಳಗಡೆ ಪ್ರವೇಶಕ್ಕೆ ಆಡಳಿತ ಮಂಡಳಿ ಅವಕಾಶ ನೀಡಿದೆ. ಆದ್ದರಿಂದ ವೇಷಧಾರಿಗಳು ಯಕ್ಷಗಾನದ ವೇಷದಲ್ಲಿಯೇ ಅಯ್ಯಪ್ಪನ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ. ಅಯ್ಯಪ್ಪನ ಸನ್ನಿಧಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ದೊರಕಿದ್ದು ನಮಗೆ ದೊರೆತ ಸುಯೋಗವೆಂದು ಕಲಾವಿದ ದಿನೇಶ್ ಕೋಡಪದವು ಸಂತೋಷ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಯಕ್ಷಗಾನ ರಂಗದಲ್ಲಿ ಇದೊಂದು ಮೈಲುಗಲ್ಲಾಗಿ ದಾಖಲಾಗಲಿದೆ.

Ads on article

Advertise in articles 1

advertising articles 2

Advertise under the article