ಮಂಗಳೂರು: ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಬಿಕಾಂ ವಿದ್ಯಾರ್ಥಿ ಸೇರಿದಂತೆ ಮೂವರು ಅರೆಸ್ಟ್
Saturday, August 19, 2023
ಮಂಗಳೂರು: ನಗರದ ಜಪ್ಪು ಕಿಂಗ್ಸ್ ಗಾರ್ಡನ್ ಬಳಿಯ ಜಪ್ಪು ಮಜಿಲ ರಸ್ತೆಯಲ್ಲಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಬಿಕಾಂ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಡ್ರೈವರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ತಲಪಾಡಿ ನಿವಾಸಿ ಅಬ್ದುಲ್ ರವೂಫ್(30) ಕೇರಳ ರಾಜ್ಯದ ಕಣ್ಣೂರು ನಿವಾಸಿ, ಕೂಳೂರು ಯೇನೆಪೋಯಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಉಬೈದ್ ಕುಲುಮಾನ್(21) ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ, ಚಿಕನ್ ಶಾಪ್ ಉದ್ಯೋಗಿ, ಮೊಹಮ್ಮದ್ ಇರ್ಷಾದ್(21) ಎಂಬವರು ಬಂಧಿತ ಆರೋಪಿಗಳು.
ಆಗಸ್ಟ್ 18ರಂದು ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ ಜೆಪ್ಪು ಕಿಂಗ್ಸ್ ಗಾರ್ಡನ್ ಬಳಿ ಜೆಪ್ಪು ಮಜಿಲ ರಸ್ತೆ ಬದಿಯಲ್ಲಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 13,750 ರೂ. ಮೌಲ್ಯದ ಒಟ್ಟು 5.071 ಗ್ರಾಂ ಎಂಡಿಎಂಎ ಮಾದಕದ್ರವ್ಯ, 1500 ರೂ. ನಗದು ಹಣ, ತೂಕ ಮಾಪನ, ಮೊಬೈಲ್ ಫೋನ್ ಹಾಗೂ 2 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,77,750 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.