ರಾಜ್ಯಾದ್ಯಂತ ಬಜರಂಗದಳದಿಂದ ಶೌರ್ಯ ಜಾಗರಣ ರಥಯಾತ್ರೆ, ಸೆ.25ರಂದು ಚಿತ್ರದುರ್ಗದಲ್ಲಿ ಚಾಲನೆ

ರಾಜ್ಯಾದ್ಯಂತ ಬಜರಂಗದಳದಿಂದ ಶೌರ್ಯ ಜಾಗರಣ ರಥಯಾತ್ರೆ, ಸೆ.25ರಂದು ಚಿತ್ರದುರ್ಗದಲ್ಲಿ ಚಾಲನೆ


ಮಂಗಳೂರು, ಸೆ,21 
ಯುವ ಪೀಳಿಗೆಯಲ್ಲಿ ರಾಷ್ಟ್ರ ಜಾಗೃತಿ, ಪೂರ್ವಜರ ಬಲಿದಾನಗಳನ್ನು ನೆನಪಿಸಿ ದೇಶ, ಧರ್ಮಕ್ಕಾಗಿ ಜಾಗೃತ ಬದುಕಿನತ್ತ ಸಂಕಲ್ಪ ಮಾಡಿಸುವ ಉದ್ದೇಶದಿಂದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ರಾಜ್ಯದಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿದೆ. ಸೆ.25ರಂದು ವೀರ ಮದಕರಿ ನಾಯಕನ ಊರು ಚಿತ್ರದುರ್ಗದಲ್ಲಿ ರಥಯಾತ್ರೆಗೆ ಚಾಲನೆ ಸಿಗಲಿದ್ದು, ಅಕ್ಟೋಬರ್ 10ರ ವರೆಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ. 
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಶರಣ್ ಪಂಪ್ವೆಲ್, ಈಗಾಗಲೇ ರಾಜ್ಯದಲ್ಲಿ ಎರಡು ಸಾವಿರ ಬಜರಂಗದಳ ಘಟಕಗಳನ್ನು ಹೊಂದಿದ್ದೇವೆ. ಮುಂದಿನ ಒಂದು ವರ್ಷದಲ್ಲಿ ಐದು ಸಾವಿರ ಘಟಕಗಳನ್ನು ಸ್ಥಾಪಿಸುವ ಗುರಿಯಿದೆಯ ಉತ್ತರ ಕರ್ನಾಟಕ ಭಾಗದಲ್ಲಿ ಬಜರಂಗದಳ ವಿಸ್ತರಣೆಯಾಗಲಿದೆ. 1964ರಲ್ಲಿ ಸ್ಥಾಪನೆಯಾದ ವಿಶ್ವ ಹಿಂದು ಪರಿಷತ್ 2024ರಲ್ಲಿ 60 ವರ್ಷ ಪೂರೈಸಲಿದ್ದು, ಈ ವೇಳೆ ದೇಶಾದ್ಯಂತ ಜಾಗೃತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಪ್ರತಿ ಜಿಲ್ಲೆಯಲ್ಲಿ ಬೃಹತ್ ಸಮಾವೇಶದ ಬಳಿಕ ಕೊನೆಗೆ ಅ.10ರಂದು ಉಡುಪಿಯಲ್ಲಿ ಸಮಾರೋಪ ಆಗಲಿದೆ. ದಿಕ್ಸೂಚಿ ಭಾಷಣಕ್ಕೆ ಚಕ್ರವರ್ತಿ ಸೂಲಿಬೆಲೆ ಬರಲಿದ್ದಾರೆ ಎಂದರು. 

ರಾಜ್ಯದ ಕಾಂಗ್ರೆಸ್ ಸರಕಾರ ಬಜರಂಗದಳ ನಿಷೇಧ ಪ್ರಸ್ತಾಪ ಇಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಯಾವುದೇ ಕಾರಣಕ್ಕೂ ಬಜರಂಗದಳ ನಿಷೇಧ ಸಾಧ್ಯವಿಲ್ಲ. ಬಜರಂಗದಳ ದೇಶ ವಿರೋಧಿ ಕೃತ್ಯ ಮಾಡಿಲ್ಲ. ದೇಶದ ಭವ್ಯ ಪರಂಪರೆ ಮುಂದಿಟ್ಟು ರಾಷ್ಟ್ರ ಜಾಗೃತಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆ ಎಂದು ಹೇಳಿದರು. ನಿಮ್ಮ ರಥಯಾತ್ರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡುವ ಉದ್ದೇಶವೇ ಎಂದು ಕೇಳಿದ ಪ್ರಶ್ನೆಗೆ, ನಾವು ಯಾರ ಲಾಭದ ಬಗ್ಗೆಯೂ ಯೋಚನೆ ಮಾಡಿಲ್ಲ. ಬಿಜೆಪಿ ರಾಜಕೀಯ ಪಕ್ಷ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದರು. ಬಿಜೆಪಿ ಸರಕಾರ ಇದ್ದಾಗಲೇ ಗೋಹತ್ಯೆ ಅಥವಾ ಇನ್ನಾವುದೇ ವಿಚಾರ ಕಟ್ಟುನಿಟ್ಟಾಗಿ ಪಾಲನೆ ಆಗಿಲ್ಲ ಎಂದು ಕೇಳಿದ್ದಕ್ಕೆ, ಬಿಜೆಪಿ ನಮ್ಮದೇ ರೀತಿಯ ಚಿಂತನೆ ಇರುವ ಪಕ್ಷ ಅಷ್ಟೇ. ಹಾಗಂತ, ಅವರಿಗೂ ನಮಗೂ ಸಂಬಂಧ ಇಲ್ಲ ಎಂದರು. 

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ 
ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ನಿಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇದರಿಂದ ನಿಮಗೆ ತೊಂದರೆ ಆಗಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಚೈತ್ರಾಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಸಂಘಟನೆಯಲ್ಲಿ ಯಾವುದೇ ಪದಾಧಿಕಾರ ಹೊಂದಿಲ್ಲ. ಆಕೆ ಉತ್ತಮ ಭಾಷಣಕಾರ್ತಿ ಎಂಬ ಕಾರಣಕ್ಕೆ ಕಾರ್ಯಕ್ರಮಗಳಿಗೆ ಕರೆಸಿಕೊಳ್ಳುವುದು ಬಿಟ್ಟರೆ, ಬೇರಾವುದೇ ಸಂಬಂಧ ಇಲ್ಲ. ಗುರುಪುರ ಸ್ವಾಮೀಜಿಯವರು ಹೇಳಿದಂತೆ, ಎರಡು ತಿಂಗಳ ಹಿಂದೆಯೇ ಈ ಬಗ್ಗೆ ತಿಳಿದಿತ್ತು. ನಾವೇನೂ ಅದರಲ್ಲಿ ಪಾತ್ರ ಇಲ್ಲ ಎಂದ ಮೇಲೆ ಚಿಂತೆ ಯಾಕೆ. ಯಾರು ತಪ್ಪು ಮಾಡಿದ್ದಾರೋ ಶಿಕ್ಷೆಯಾಗಲಿ. ಈಗ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article