ಕ್ಷಣಿಕ ಸಿಟ್ಟು ದವಡೆಗೆ ಮೂಲ ; ಪೆಟ್ಟು ಕೊಡಲು ಹೋಗಿ ತಾವೇ ಪೆಟ್ಟು ತಿಂದ ಸಕಲೇಶಪುರದ ಯುವಕರು
Thursday, September 21, 2023
ಮಂಗಳೂರು, ಸೆ.21
ಟ್ರಾಫಿಕ್ ದಟ್ಟಣೆ ಇದ್ದರೆ ವಾಹನ ಸವಾರರ ನಡುವೆ ಪೈಪೋಟಿ, ಸೈಡ್ ಕೊಡುವ ನೆಪದಲ್ಲಿ ಮಾತಿಗೆ ಮಾತು, ಗಲಾಟೆ ಆಗುವುದು ಸಹಜ. ಹಾಗೆಂದು ನಡುರಸ್ತೆಯಲ್ಲಿ ಹೊಡೆದಾಟ ಮಾಡಿದರೆ ಹೇಗಿರುತ್ತೆ. ಬೇರೆ ಊರಿಗೆ ಹೋಗಿದ್ದಾಗಂತೂ ಗಲಾಟೆ ಮಾಡಿದರೆ, ಅಲ್ಲಿ ಹೋಗಿದ್ದವರೇ ಫಜೀತಿಗೆ ಒಳಗಾಗುತ್ತಾರೆ. ಪೆಟ್ಟು ಕೊಡಲು ಹೋಗಿ ತಾವೇ ಪೆಟ್ಟು ತಿನ್ನುವ ಸ್ಥಿತಿಯಾಗುತ್ತೆ.
ಬೆಳ್ತಂಗಡಿ ಪೇಟೆಯಲ್ಲಿ ನಿನ್ನೆ ಸಂಜೆ ಇದೇ ರೀತಿಯ ಘಟನೆ ನಡೆದಿದೆ. ಕಾರಿಗೆ ಬೈಕ್ ಸವಾರ ಸೈಡ್ ಕೊಟ್ಟಿಲ್ಲ, ಟ್ರಾಫಿಕ್ಕಲ್ಲಿ ಕಾರಿಗೆ ತಾಗಿಕೊಂಡು ಹೋಗಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಕಾರಿನಲ್ಲಿದ್ದ ಯುವಕರು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಬೈಕ್ ಸವಾರಿ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವಕನನ್ನು ಅಡ್ಡಹಾಕಿ ಆತನ ಹೆಲ್ಮೆಟನ್ನೇ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.
ಇದರ ಬೆನ್ನಲ್ಲೇ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು ಕಾರಿನಲ್ಲಿದ್ದ ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಸ್ಥಳೀಯರ ಪ್ರಶ್ನೆಗೆ ಯುವಕರು ಉದ್ಧಟತನ ತೋರಿದ್ದಾರೆ. ಮಾತಿಗೆ ಮಾತು ಬೆಳೆದು ಸಾರ್ವಜನಿಕರೇ ಸೇರಿ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಎರಡೂ ತಂಡಗಳ ನಡುವೆ ನಡು ರಸ್ತೆಯಲ್ಲಿ ಹೊಡೆದಾಟ ನಡೆದಿದ್ದು, ಮಾರಾಮಾರಿಯೇ ಆಗಿಹೋಗಿದೆ. ಕೊನೆಗೆ, ಪೊಲೀಸರು ಬಂದು ಜಗಳ ಬಿಡಿಸಿದ್ದು, ಎರಡೂ ಕಡೆಯ ಯುವಕರನ್ನು ಬೆಳ್ತಂಗಡಿ ಠಾಣೆಗೆ ಒಯ್ದಿದ್ದಾರೆ.
ಮೊದಲು ಹಲ್ಲೆಗೀಡಾದ ಯುವಕ ಪಶ್ಚಿಮ ಬಂಗಾಳದ ರಹೀಮುದ್ದೀನ್ ಎಂಬವನಾಗಿದ್ದು, ಪೆಟ್ಟು ತಿಂದ ಕಾರಣಕ್ಕೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ತಾನೇನೂ ತಪ್ಪು ಮಾಡಿಲ್ಲ, ಬೈಕಿನಲ್ಲಿ ಹೋಗುತ್ತಿದ್ದವನನ್ನು ಅಡ್ಡಹಾಕಿ ಹಲ್ಲೆ ನಡೆಸಿದ್ದಾರೆ ಎಂದಿದ್ದಾನೆ. ಆನಂತರ ಪೆಟ್ಟೂ ತಿಂದವರು ಸಕಲೇಶಪುರ ಮೂಲದ ಅಕ್ಷಯ್, ಶ್ಯಾಮಪ್ರಸಾದ್ ಮತ್ತು ಸುದೀಪ್ ಎಂಬವರಾಗಿದ್ದಾರೆ.
ಈ ಯುವಕರು ಪ್ರವಾಸಕ್ಕೆಂದು ಮಂಗಳೂರಿಗೆ ಬಂದು ಬೆಳ್ತಂಗಡಿ ಮೂಲಕ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದರು. ಬುಧವಾರ ಸಂಜೆ ಗಣೇಶೋತ್ಸವ ನಿಮಿತ್ತ ಬೆಳ್ತಂಗಡಿಯಲ್ಲಿ ಟ್ರಾಫಿಕ್ ಹೆಚ್ಚಿತ್ತು. ಇದರ ನಡುವೆ, ಬೈಕ್ ಸವಾರನಿಗೆ ಹಲ್ಲೆಗೈದು ತಾವೇ ಪೆಟ್ಟು ತಿಂದಿದ್ದಾರೆ. ಕ್ಷಣಿಕ ಸಿಟ್ಟು ದವಡೆಗೆ ಮೂಲ ಎನ್ನುವಂತೆ ಬೈಕ್ ಸವಾರನಿಗೆ ಹೊಡೆಯಲು ಹೋಗಿ ಯುವಕರೇ ಪೆಟ್ಟು ತಿಂದಿದ್ದಾರೆ. ಕೊನೆಗೆ, ಬೆಳ್ತಂಗಡಿ ಠಾಣೆಯಲ್ಲಿ ಎರಡೂ ಕಡೆಯ ಯುವಕರು ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ.