ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕದ್ರಿ ದೇಗುಲವೇ ಟಾರ್ಗೆಟ್ - ಎನ್ಐಎ
Friday, September 15, 2023
ಮಂಗಳೂರು: ನಗರದ ನಾಗುರಿಯ ಗರೋಡಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗುರಿ ನಗರದ ಅತ್ಯಂತ ಪುರಾತನ ಶ್ರೀ ಕದ್ರಿ ದೇಗುಲವೇ ಆಗಿತ್ತು ಎಂದು ಎನ್ಐಎ ತನಿಖೆಯಿಂದ ಬಯಲಾಗಿದೆ.
2022 ನವೆಂಬರ್ 19 ರಂದು ನಗರದ ನಾಗುರಿಯ ಗರೋಡಿ ಬಳಿ ಸಂಚಾರದಲ್ಲಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಪಡೀಲ್ ನಲ್ಲಿ ರಿಕ್ಷಾ ಹತ್ತಿದ್ದ ಉಗ್ರ ಶಾರೀಕ್ ನ ಬಳಿಯಿದ್ದ ಕುಕ್ಕರ್ ಬಾಂಬ್ ನಾಗುರಿ ಬಳಿ ಆಕಸ್ಮಿಕವಾಗಿ ಸ್ಪೋಟಗೊಂಡಿತ್ತು. ಇದರಿಂದ ಶಾರೀಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರು ಗಾಯಗೊಂಡಿದ್ದರು. ಈ ಇಬ್ಬರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಿಕ್ಷಾಚಾಲಕ ಗುಣಮುಖರಾಗಿ ಮನೆಗೆ ಮರಳಿದ್ದರೆ, ಉಗ್ರ ಶಾರೀಕ್ ನನ್ನು ಬೆಂಗಳೂರು ಆಸ್ಪತ್ರೆ ಗೆ ಶಿಪ್ಟ್ ಮಾಡಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ಆದರೆ ಉಗ್ರ ಶಾರೀಕ್ ನ ಕುಕ್ಕರ್ ಬಾಂಬ್ ಸ್ಫೋಟದ ಟಾರ್ಗೆಟ್ ಯಾವುದೆಂದು ತಿಳಿದುಬಂದಿರಲಿಲ್ಲ. ಇದೀಗ ಮೊದಲ ಬಾರಿಗೆ ಎನ್ ಐ ಎ ಪ್ರಕಟಣೆಯಲ್ಲಿ ಉಗ್ರ ಶಾರೀಕ್ ನ ಕುಕ್ಕರ್ ಬಾಂಬ್ ಸ್ಪೋಟದ ಟಾರ್ಗೆಟ್ ಕದ್ರಿ ದೇಗುಲವೇ ಆಗಿತ್ತು ಎಂದು ಪ್ರಕಟಣೆಯಾಗಿದೆ.
ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಮೋಸ್ಟ್ ವಾಂಟೆಡ್ ಉಗ್ರ ಅರಾಫತ್ ಆಲಿಯನ್ನು ದೆಹಲಿಯಲ್ಲಿ ಎರಡು ದಿನಗಳ ಹಿಂದೆ ಬಂಧಿಸಲಾಗಿತ್ರು ಈತ ಮಂಗಳೂರು ಗೋಡೆಬರಹ ಮತ್ತು ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ. ಈತನ ಬಂಧನದ ಪ್ರಕಟನೆ ಯಲ್ಲಿ ಉಗ್ರ ಶಾರೀಕ್ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ಉದ್ದೇಶಿಸಿದ್ದ ಎಂದು ಬರೆಯಲಾಗಿದೆ.