ಮಂಗಳೂರು: ನಿಫಾ ವೈರಸ್ ಆತಂಕಬೇಡ, ಜಾಗ್ರತೆಯಿರಲಿ - ಡಿಎಚ್ಒ
Wednesday, September 13, 2023
ಮಂಗಳೂರು: ಕೇರಳದಲ್ಲಿ ಇಬ್ಬರನ್ನು ಬಲಿ ಪಡೆದಿರುವ ನಿಫಾ ವೈರಸ್ ಬಗ್ಗೆ ದ.ಕ.ಜಿಲ್ಲೆಯ ಜನತೆಗೆ ಆತಂಕ ಬೇಡ. ಆದರೆ ಜಾಗ್ರತೆಯಿರಲಿ. ಜ್ವರ ಕಂಡು ಬಂದಲ್ಲಿ ನಿರ್ಲಕ್ಷ್ಯ ಬೇಡ. ತಕ್ಷಣ ವೈದ್ಯರನ್ನು ಕಾಣುವಂತೆ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುದರ್ಶನ್ ಸಲಹೆ ನೀಡಿದರು.
ದ.ಕ.ಜಿಲ್ಲಾ ಆರೋಗ್ಯಾಧಿಕಾರಿಯವರ ಕಚೇರಿಯಲ್ಲಿ ಮಾತನಾಡಿದ ಅವರು, ನಿಫಾ ವೈರಸ್ ಸೋಂಕು ದ.ಕ.ಜಿಲ್ಲೆಗೆ ಹರಡಿಲ್ಲ. ಆದರೆ ಮುನ್ನೆಚ್ಚರಿಕಾ ಹಿನ್ನೆಲೆಯಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಜ್ವರ ಸಮೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲಿ ಔಷಧಿ ದಾಸ್ತಾನು ಇರಿಸಲು ಸೂಚನೆ ನೀಡಲಾಗಿದೆ. ತಾಲೂಕು, ಆಸ್ಪತ್ರೆಗಳಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆಯನ್ನು ಮಾಡಲಾಗಿದೆ. ಸಾಮಾನ್ಯ ವೈರಲ್ ಜ್ವರದಂತೆ ನಿಫಾ ಲಕ್ಷಣವಿದ್ದರೂ, ಜ್ಞಾನ ತಪ್ಪುವುದು, ಮಾನಸಿಕ ಗೊಂದಲ ಮತ್ತು ಫಿಟ್ಸ್ ಲಕ್ಷಣವಿದ್ದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸೂಚನೆ ನೀಡಿದರು.
ಶಂಕಿತ ನಿಫಾ ಸೋಂಕಿತರಿದ್ದಲ್ಲಿ ಅವರನ್ನು ಪ್ರತ್ಯೇಕವಾಗಿಡುವುದು, ಹಸ್ತಲಾಘವ ಮಾಡಬಾರದು, ರೋಗಿಗಳ ಉಪಚಾರದ ವೇಳೆ ಮಾಸ್ಕ್ , ಗ್ಲೌಸ್ ಧರಿಸುವುದು ಕಡ್ಡಾಯ. ನಿಫಾ ಹಂದಿ, ಕುದುರೆ, ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಲ್ಲೂ ಕಂಡು ಬರುತ್ತದೆ. ಆದ್ದರಿಂದ ಪ್ರಾಣಿಗಳ ಜೊಲ್ಲು, ಮಲವನ್ನು ಸ್ಪರ್ಶಿಸಬಾರದು. ಎಲ್ಲಾ ಹಣ್ಣು ಹಂಪಲುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ಬೇಯಿಸಿ ತಿನ್ನಬೇಕು. ಬಾವಲಿಯಂತಹ ಪ್ರಾಣಿಗಳು ಕಚ್ಚಿರುವ ಆಹಾರ ಬಳಸಬಾರದು ಎಂದು ಆರೋಗ್ಯಾಧಿಕಾರಿ ಡಾ.ಸುದರ್ಶನ್ ಹೇಳಿದರು.