ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಅದಾನಿ ಪಾಲಾಗಲು ದಿನಗಣನೆ
Friday, October 6, 2023
ಮಂಗಳೂರು: ಇದೇ ಅ.31ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅದಾನಿ ಗ್ರೂಪ್ ಪಾಲಾಗಲಿದೆ. ಅಂದಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗಿನ ಒಪ್ಪಂದ ಕೊನೆಗೊಳ್ಳಲಿದೆ. ಈ ಮೂಲಕ ಮಂಗಳೂರು ಏರ್ಪೋರ್ಟ್ ಸಂಪೂರ್ಣ ಅದಾನಿ ಕೈವಶವಾಗಲು ದಿನಗಣನೆ ಆರಂಭವಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಆದಾನಿ ಗ್ರೂಪ್ ಜಂಟಿ ಆಡಳಿತದ ಅವಧಿ ಅ.31 ರಂದು ಕೊನೆಗೊಳ್ಳಲಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆಯೀಗ ಸಂಪೂರ್ಣ ಖಾಸಗಿ ಪಾಲಾಗಲಿದೆ. ವಿಮಾನ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ದೇಶದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿ ಒಡೆತನಕ್ಕೆ ನೀಡಿತ್ತು. 2020ರ ಅ.31 ರಂದು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ಗೆ ನಿರ್ವಹಣೆಗೆ ನೀಡಲಾಗಿತ್ತು. ಈ ವೇಳೆ ಮೂರು ವರ್ಷಗಳ ಕಾಲ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಗ್ರೂಪ್ ಜಂಟಿ ಆಡಳಿತಕ್ಕೆ ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದ ಅವಧಿ ಮುಕ್ತಾಯದ ಹಂತ ತಲುಪಿದೆ. ಆದ್ದರಿಂದ ಈ ತಿಂಗಳಾಂತ್ಯಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಅದಾನಿ ಗ್ರೂಪ್ ಒಡೆತನಕ್ಕೆ ಸೇರಲಿದೆ.
ಅದಾನಿ ಗ್ರೂಪ್ ಒಡೆತನಕ್ಕೆ ವಿಮಾನ ನಿಲ್ದಾಣ ಹೋದ ಬಳಿಕ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ವಿಶ್ರಾಂತಿ ಹಾಲ್, ಪ್ರವೇಶ ನಿರ್ಗಮನ ದ್ವಾರ, ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಹಲವು ಅಭಿವೃದ್ಧಿ ಗಳನ್ನು ಮಾಡಲಾಗಿದೆ. ಆದರೆ ಸರಕಾರಿ ಸ್ವಾಮ್ಯದ ಸಂಸ್ಥೆ ಖಾಸಗಿ ಪಾಲಾಗಿದ್ದು ಮಂಗಳೂರಿನ ಜನತೆಗೆ ಬೇಸರ ತರಿಸಿದೆ. ಈ ವಿಮಾನ ನಿಲ್ದಾಣ ಸರಕಾರಿ ಸೊತ್ತಾಗಿ ಉಳಿಯಲು ಸಾಕಷ್ಟು ಹೋರಾಟಗಳು ನಡೆದಿದೆ. ಆದರೆ ಈ ಹೋರಾಟ ಸಂಪೂರ್ಣ ವ್ಯರ್ಥವಾಗಿದೆ.
ಬೈಟ್_ ಜೆರಾಲ್ಡ್ ಟವರ್, ಸಾಮಾಜಿಕ ಕಾರ್ಯಕರ್ತ
ಮಂಗಳೂರು ವಿಮಾನ ನಿಲ್ದಾಣವು ಅದಾನಿ ಏರ್ ಪೋರ್ಟ್ ಎಂದು ಮರುನಾಮಕರಣವಾಗ ಮಂಗಳೂರಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಂಪೂರ್ಣ ವಿಮಾನ ನಿಲ್ದಾಣವೇ ಅದಾನಿ ಗ್ರೂಪ್ ಪಾಲಾಗಿದೆ. ಆದರೆ ಹೆಸರು ಮಾತ್ರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಇರಲಿದೆ. ಆದರೆ ವಿಮಾನ ನಿಲ್ದಾಣ ತಮ್ಮದೆಂಬ ಭಾವ ಮಾತ್ರ ದೂರವಾಗಲಿದೆ.